Sunday, February 4, 2018

ಕಥೆ-ತಂತ್ರದ ನಡುವಿನ ಹದ.

ಫಕೀರ ಎನ್ನುವ ಅಂಕಿನನಾಮದಲ್ಲಿ ಬರೆಯುವ ಶ್ರೀಧರ ಬನವಾಸಿಯವರು ನನ್ನನ್ನು ತಮ್ಮ ಕಾದಂಬರಿಗೆ ಮುನ್ನುಡಿಯನ್ನು ಬರೆದುಕೊಡಬೇಕೆಂದು ಹೇಳಿದಾಗ ನಾನು ಸಂತೋಷದಿಂದ ಒಪ್ಪಿದೆ. ಬನವಾಸಿಯವರು ತಮ್ಮ ಹಿಂದಿನ ಕಥಾಸಂಕಲನಗಳಾದ ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ ಮತ್ತು ಬ್ರಿಟಿಷ್ ಬಂಗ್ಲೆಯ ಪ್ರತಿಗಳನ್ನು ನನಗೆ ಅವುಗಳು ಪ್ರಕಟವಾದ ತಕ್ಷಣವೇ ಕಳುಹಿಸಿದ್ದರು. ಹೀಗೆ ಯುವ ಲೇಖಕರು ತಮ್ಮ ಪುಸ್ತಕಗಳನ್ನು ಕಳುಹಿಸುತ್ತಿರುತ್ತಾರೆ ಹಾಗೂ ಕೂದಲು ನರೆಯುತ್ತಿರುವ ತಮ್ಮ ಹಿರಿಯ ಜನಾಂಗದವರಿಂದ ಒಂದು ರೀತಿಯ ಪ್ರೋತ್ಸಾಹದ-ವಿಮರ್ಶೆಯ-ಮೆಚ್ಚುಗೆಯ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾರೆ. ಅದು ಸಹಜವೇ. ಬರವಣಿಗೆಯನ್ನು ಕೈಗೊಂಡ ಹೊಸತರಲ್ಲಿ ಈ ಪ್ರಕ್ರಿಯೆಗೆ ಯುವ ಲೇಖಕರಾಗಿ ನಾನು ನನ್ನ ಓರಗೆಯವರೂ ಒಡ್ಡಿಕೊಂಡದ್ದು ನೆನಪಿಗೆ ಬರುತ್ತದೆ. ಹೀಗಾಗಿ ಯುವ-ಹೊಸದಾಗಿ ಬರೆವಣಿಗೆಯನ್ನು ಕೈಹಿಡಿದ ಬರಹಗಾರರಲ್ಲಿ ನಾವುಗಳು ನಮ್ಮ ಗತಕಾಲವನ್ನೂ, ಯೌವನವನ್ನೂ ಕಾಣುತ್ತೇವೆ. ಅದೇ ಕಾಲಕ್ಕೆ ನಮ್ಮ ಕಾಲದ-ಸಮಯದ-ಕಾಯಕದ ಒತ್ತಡಗಳಲ್ಲಿ ಹಲವೊಮ್ಮೆ ಬಂದ ಪುಸ್ತಕಗಳನ್ನು ಓದಿ, ಅದನ್ನು ಕಳುಹಿಸಿಕೊಡುವ ತೊಂದರೆಯನ್ನು ಕೈಗೊಂಡ ಲೇಖಕರಿಗೆ ಒಂದೆರಡು ಸಾಲು ಪತ್ರವನ್ನೂ ಬರೆಯದಿರುವ ಅಪರಾಧವನ್ನು ನಾವು ಸದಾ ಮಾಡುತ್ತಲೇ ಇರುತ್ತವೆ. ಬರೆಯಬಾರದೆಂದಲ್ಲ – ಆದರೆ ಹೇಗೂ ಇಂದು-ನಾಳೆಯೆಂದು ಆ ಓದನ್ನು ಮುಂದುವರೆಸಿ ಹತಾಶೆಯಿಂದ ಸುಮ್ಮನಾಗಿಬಿಡುತ್ತೇವೆ. ನಾವು ಅರಗಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಭೆಗಳು ಅರಳುತ್ತಿರುವುದೇ ಇದಕ್ಕೆ ಕಾರಣ.

ಈ ಹಿನ್ನೆಲೆಯಲ್ಲಿ ಬನವಾಸಿಯವರು ಮುನ್ನುಡಿಯನ್ನು ಕೇಳಿದಾಗ ನಾನು ಕೂಡಲೇ ಒಪ್ಪಿದ್ದರಲ್ಲಿ, ಅವರ ಪುಸ್ತಕಗಳನ್ನು ಓದುವ ಒತ್ತಡವನ್ನು ನಾನು ನನ್ನ ಮೇಲೆ ಹೇರಿಕೊಂಡೆ. ಅಲ್ಲದೇ, ಅದಕ್ಕೊಂದು ನಿಗದಿತ ಸಮಯದ ಪರಿಧಿಯನ್ನೂ ಹಾಕಿಕೊಂಡೆ. ಹೀಗೆ ಒತ್ತಡ ಬಿದ್ದಾಗ ಸಮಯ ತಾನಾಗಿಯೇ ಕೂಡಿಬರುತ್ತದೆ. ಆದ್ಯತೆಗಳು ಬದಲಾಗುತ್ತವೆ. ಹಾಗೂ ಓದದೇ ಉಳಿದ ಪುಸ್ತಕಗಳ ಯಾದಿಯಲ್ಲಿ ಇವರ ಪುಸ್ತಕಕ್ಕೆ ಅಗ್ರಸ್ಥಾನ ಉಂಟಾಗುತ್ತದೆ. ಹೀಗೆ ನಾನು ಕಳೆದ ಹಲವು ದಿನಗಳಲ್ಲಿ ಬನವಾಸಿಯವರ ಪುಸ್ತಕಗಳ ಸಹವಾಸಿಯಾಗಿದ್ದೆ. ಒಂದು ರೀತಿಯಲ್ಲಿ ಈ ಮುನ್ನುಡಿ ಬನವಾಸಿಯವರನ್ನು ನಿಮಿತ್ತವಾಗಿಟ್ಟುಕೊಂಡು ಹೊಸದಾಗಿ ಬರೆಯುತ್ತಿರುವವರ ತುಮುಲಗಳನ್ನು ಕಾಣುವ ಪ್ರಯತ್ನವೆನ್ನಬೇಕು. ಬನವಾಸಿಯವರೂ ಈ ಮುನ್ನುಡಿಯನ್ನು ತಮ್ಮ ಈ ಪುಸ್ತಕಕ್ಕೆ ಸೀಮಿತವಾದ ಟಿಪ್ಪಣಿಯೆಂದು ನೋಡದೆ, ಯುವಲೇಖಕರ ಬರಹದ ಆಯ್ಕೆ-ತುಮುಲಗಳಿಗೆ ಬೇರು ಕಾದಂಬರಿಯ ಚೌಕಟ್ಟನ್ನುಪಯೋಗಿಸಿ, ಒಟ್ಟಾರೆ ಪ್ರತಿಕ್ರಿಯಿಸುತ್ತಿರುವ ಪ್ರಕ್ರಿಯೆ ಎಂದು ನೋಡುತ್ತಾರೆಂದು ಎಣಿಸಿದ್ದೇನೆ.

ಒಬ್ಬ ಕಥೆಗಾರನ ಮೊದಲ ಪುಸ್ತಕ ಬಂದಾಗ ಸಾಮಾನ್ಯವಾಗಿ ಪ್ರೋತ್ಸಾಹದ ಮಾತುಗಳನ್ನಾಡುತ್ತಾ ಹಿರಿಯರು, ಈ ಯುವಕರ ಬೆಳವಣಿಗೆಯನ್ನು ಕೌತುಕದಿಂದ ಕಾಣಬೇಕಾಗಿದೆ, ಇವರು ಕಥಾ ಜಗತ್ತಿನಲ್ಲಿ ಭರವಸೆ ಹುಟ್ಟಿಸುವ ಬರಹಗಾರರು ಎಂಬಂತಹ ಮಾತುಗಳನ್ನು ಹೇಳುವುದು ವಾಡಿಕೆ. ಆದರೆ ಗೆಳೆಯ ಜಯಂತ ಕಾಯ್ಕಿಣಿ ಅನೇಕ ಬಾರಿ ಹೇಳಿರುವಂತೆ, ಬೆಳವಣಿಗೆಯನ್ನು ಕೌತುಕದಿಂದ ಕಾಣಬೇಕಾಗಿದೆ ಎಂದು ಹೇಳಿದ ಹಿರಿಯ ವಿಮರ್ಶಕರು ಯುವ ಲೇಖಕನ ಎರಡನೇ ಪುಸ್ತಕ ಬರುವ ವೇಳೆಗೆ ತಾವೇ ನಾಪತ್ತೆಯಾಗಿಬಿಡುತ್ತಾರೆ. ಈ ಮಾತು ನನ್ನಿಂದಲೂ ಹಿಂದೆ ಆಗಿರಬಹುದು. ಆದರೆ ಬರಹಗಾರನ ನಾಲ್ಕನೇ ಪುಸ್ತಕ ಬಂದಾಗ ಆಶೀರ್ವಚನ ಮತ್ತು ಭರವಸೆಯ ಮಾತುಗಳನ್ನು ಬದಿಗಿಟ್ಟು ತುಸು ಗಂಭೀರವಾದ ಮೌಲ್ಯಮಾಪನವನ್ನು ಮಾಡುವ ಸಮಯ ಉಂಟಾಗಿದೆ ಎನ್ನಬಹುದು. ಬನವಾಸಿಯವರ ಕಾದಂಬರಿಯನ್ನು ಈ ಹಿನ್ನೆಲೆಯಲ್ಲಿ ಅವರ ಇತರ ಕೃತಿಗಳೊಂದಿಗೆ ಓದಿದ್ದೇನೆ ಹಾಗೂ ಆ ನೆಲೆಯಲ್ಲಿಯೇ ಈ ಮುನ್ನುಡಿಯನ್ನು ಬರೆಯುತ್ತಿದ್ದೇನೆ.

ಕಥೆಗಾರನೊಬ್ಬನ ಬೆಳವಣಿಗೆಯನ್ನು ನೋಡುವುದು ಹೇಗೆ, ಒಟ್ಟಾರೆ ಬರವಣಿಗೆಯ ಮೌಲ್ಯಮಾಪನ ಮಾಡುವುದು ಹೇಗೆ ಎನ್ನುವ ಪ್ರಶ್ನೆಯನ್ನು ಹಿಡಿದು ನಾವು ಪ್ರಾರಂಭಿಸೋಣ. ಪ್ರಾರಂಭದ ಬರವಣಿಗೆಯಲ್ಲಿ ಯುವಲೇಖಕರು ಒಂದು ರೀತಿಯ ಭಾವನಾತ್ಮಕ ನೆಲೆಯಲ್ಲಿ, ಸಂಕೀರ್ಣತೆಯನ್ನು ತೊರೆದು ಕಥನಕಾರ್ಯವನ್ನು ಕೈಗೊಳ್ಳುವುದು ಸಹಜವಾದದ್ದು.

ಈ ಭಾವನಾತ್ಮಕ ನೆಲೆಯಲ್ಲಿಯೇ ಬನವಾಸಿಯವರು ತಮ್ಮ ಅಂಕಿತ ನಾಮವನ್ನು ಫಕೀರ ಎಂದಿರಿಸಿಕೊಂಡಿದ್ದಾರೆ ಎಂದು ನಂಬುತ್ತೇನೆ. ಫಕೀರ ಎನ್ನುವ ಅಂಕಿತ ನಾಮದಲ್ಲಿಯೇ ಒಂದು ಸಂದೇಶವನ್ನು ಈ ಯುವ ಬರಹಗಾರರು ಸೂಚಿಸುತ್ತಿರಬಹುದು. ಆದರೆ ಅಂಕಿತನಾಮ ಇಟ್ಟುಕೊಂಡವರು ಒಂದಿಷ್ಟು ಅನಾಮಧೇಯತೆಯನ್ನು ಪಡೆಯಲು ಪ್ರಯತ್ನಿಸುತ್ತಾರೆ ಎನ್ನುವುದು ನನ್ನ ನಂಬಿಕೆ. ಆದರೆ ಬನವಾಸಿಯವರ ವಿಷಯದಲ್ಲಿ ಹಾಗಾಗಿಲ್ಲ. ಅವರ ಮೂಲ ಹೆಸರೂ ಈ ಅಂಕಿತನಾಮದೊಂದಿಗೆ ಬೆಸೆದುಬಂದಿದೆಯಾದ್ದರಿಂದ ಉರ್ದುವಿನ ಕವಿಗಳಹಾಗೆ ಅದು ಅವರ ಹೆಸರಿನ ಭಾಗವೇ ಆಗಿದೆ. ಆದರೆ ಬನವಾಸಿಯವರು ಬರೆಯುವ ಸಾಹಿತ್ಯಕ್ಕೂ ಆ ಹೆಸರು ಸ್ಫುರಿಸಬಹುದಾದ ಸೂಚ್ಯಕ್ಕೂ ಹೆಚ್ಚಿನ ಸಂಬಂಧ ಕಾಣಿಸುತ್ತಿಲ್ಲ. ಈ ಘಟ್ಟದಲ್ಲಿ ಅವರು ಫಕೀರ ಎನ್ನುವ ಅಂಕಿತ ನಾಮವನ್ನು ಯಾಕೆ ಮತ್ತು ಎಷ್ಟುಕಾಲ ಹೊತ್ತು ನಡೆಯುತ್ತಾರೆ ಎನ್ನುವುದು ಕುತೂಹಲದ ವಿಷಯವೇ. ಹಿಂದೆ ನಳಿನಿ ದೇಶಪಾಂಡೆ ಎನ್ನುವ ಹೆಸರೂ ಅಥವಾ ಲಂಕೇಶರು ಬಳಸುತ್ತಿದ್ದ ನೀಲು ಹೆಸರನ್ನು ಉಪಯೋಗಿಸುವುದರಲ್ಲಿ ತಮಗೆ ಖ್ಯಾತಿ ತಂದಿರುವ ಸಾಹಿತ್ಯ ಪ್ರಕಾರಕ್ಕಿಂತ ಭಿನ್ನವಾದ ಒಂದು ನಿರ್ದಿಷ್ಟ ಕಾರಣಕ್ಕೆ ಆ ಅಂಕಿತನಾಮಗಳು ಉಪಯೋಗವಾಗುತ್ತಿತ್ತೆನ್ನುವುದನ್ನು ಗಮನಿಸಬೇಕು. ಅದೇ ಮಾಸ್ತಿಯವರು ಮೊದಲಿಗೆ ಶ್ರೀನಿವಾಸ ಎನ್ನುವ ಅಂಕಿತನಾಮ ಇಟ್ಟುಕೊಂಡರೂ, ಕಡೆಕಡೆಗೆ ತಮ್ಮ ಪೂರ್ಣ ಹೆಸರನ್ನು ಉಪಯೋಗಿಸಿಯೇ ಕಥೆಗಳನ್ನು ಬರೆಯುತ್ತಿದ್ದರು. ಬನವಾಸಿಯವರ ಈ ಅಂಕಿನಾಮಕ್ಕಿಲ್ಲದ ಅನಾಮಧೇಯತೆಯು ಏನನ್ನು ಸೂಚಿಸಹೊರಟಿದೆ ಎನ್ನುವುದು ಗಹನವಾಗಿಯೇ ಇದೆ. ಹಳೆಯ ಅಭ್ಯಾಸದಿಂದ ಇದು ಮುಂದುವರೆಯುತ್ತಿರಬಹುದಾದರೂ, ಅದನ್ನು ಮುಂದುವರೆಸುವುದರಲ್ಲಿ ನನಗೆ ಹೆಚ್ಚಿನ ಅರ್ಥ ಕಾಣಿಸುತ್ತಿಲ್ಲ.

ಕಥೆಗಾರರಾಗಿ ನಾವೆಲ್ಲರೂ ಒಂದು ಭಾವನಾತ್ಮಕ ನೆಲೆಯಲ್ಲಿ ಪ್ರಾರಂಭಿಸುತ್ತೇನೆ. ಮುಂದೆ ಜೀವನಾನುಭವ ಹೆಚ್ಚಾದಂತೆ, ಓದು ಹೆಚ್ಚಾದಂತೆ, ಕಥನ ಕ್ರಿಯೆಯು ಕೈಗೆ ದಕ್ಕುತ್ತಿರುವಂತೆ ಕಥೆಗಳೂ ಹೆಚ್ಚು ಸಶಕ್ತವಾಗುತ್ತಾ ಮುಂದುವರೆಯುವುದಲ್ಲದೇ, ಓದುಗರಿಗೆ ಅನೇಕ ಆಯಾಮಗಳನ್ನು ಬಿಡಿಸಿಡುವ ಕಲಾಕೃತಿಗಳಾಗುತ್ತವೆ. ಇದು ಕಥೆಗಾರನ ತಂತ್ರ ಮತ್ತು ಅನುಭವವು ಮಾಗುತ್ತಿರುವ ಲಕ್ಷಣ. ಹೀಗಾಗಿ ಬರಹಗಾರನ ಭರವಸೆ, ಸೃಜನಶೀಲತೆಯ ಪ್ರದರ್ಶನದ ಮಾಪನದಲ್ಲಿ ಮೊದಲ ಪುಸ್ತಕಕ್ಕಿಂತ ಭಿನ್ನವಾದದನ್ನು, ಗಹನವಾದದ್ದನ್ನು ಮುಂದಿನ ಬರವಣಿಗೆಗೆ ನೀಡಬೇಕಾಗುತ್ತದೆ. ಬೇರು ಕಾದಂಬರಿಯನ್ನು ಈ ದೃಷ್ಟಿಯಿಂದ ನಾನು ಕಾಣುತ್ತಿದ್ದೇನೆ. ಹಾಗೂ ಅದಕ್ಕೆ ಬನವಾಸಿಯವರ ಹಿಂದಿನ ಪುಸ್ತಕಗಳಿಗೆ ಇರಿಸಿರುವ ಮಾಪನಕ್ಕೆ ಭಿನ್ನವಾದ ಮಾಪನವನ್ನಿಡಬೇಕೆಂದು ನಾನು ನಂಬುತ್ತೇನೆ.

ಬನವಾಸಿಯವರು ಒಳ್ಳೆಯ ಬರಹಗಾರರು. ಅವರಿಗೆ ಕಥೆಯನ್ನು ಹೆಣೆಯುವ ಸಾಮರ್ಥ್ಯವಿದೆ. ಆಸಕ್ತಿಕರ ಕಥಾವಸ್ತುಗಳಿವೆ. ಅವರ ವಿಚಾರಧಾರೆ, ಮತ್ತು ನಿಲುವುಗಳು ಆಧುನಿಕವಾಗಿವೆ. ಯಾವ ಸಮಸ್ಯೆಗಳನ್ನು-ವಿಚಾರಗಳನ್ನು ಕಥನಕ್ಕೆ ಒಡ್ಡಬೇಕು-ಒಡ್ಡಬಹುದು ಅನ್ನುವುದರ ಬಗ್ಗೆ ಒಳ್ಳೆಯ ಪರಿಜ್ಞಾನವಿದೆ. ಅದಕ್ಕೆ ತಕ್ಕುದಾದ ಭಾಷೆಯೂ ಅವರಿಗೆ ದಕ್ಕಿದೆ. ವಿವರಗಳನ್ನು ನೋಡುವ ಸೂಕ್ಷ್ಮಗ್ರಾಹಿ ಕಣ್ಣುಗಳಿವೆ. ಮೂರು ಕಥಾಸಂಕಲನಗಳ ನಂತರ ಅವರು ಒಂದು ಕಾದಂಬರಿಯನ್ನು ಬರೆಯುವ ಸಾಹಸ ಮಾಡಿದ್ದಾರೆ. ಅದನ್ನೂ ಸಮರ್ಥವಾಗಿ ಬರೆದಿದ್ದಾರೆ. ಕಾದಂಬರಿಗಿರಬೇಕಾದ ವಿಶಾಲ ಕ್ಯಾನ್ವಾಸನ್ನೂ, ಅದರ ಮೇಲೆ ಚಿತ್ರಿಸಬೇಕೆಂದಿರುವ ವಿಚಾರವೂ ಅವರ ಮನಸ್ಸಿನಲ್ಲಿ ಸ್ಪಷ್ಟವಾಗಿದೆ. ಹೀಗಾಗಿಯೇ ಈ ಕಾದಂಬರಿಯು ಒಂದು ರೀತಿಯ ನಿರೀಕ್ಷಿತ ತಂತ್ರದಲ್ಲಿ ಬರೆಯಿಸಿಕೊಳ್ಳುತ್ತಾ ಹೋಗುತ್ತದೆ.

ಅವರ ಬ್ರಿಟಿಷ್ ಬಂಗ್ಲೆ, ಕೊಪ್ಪಿವಾಡನ ಹೋಟೆಲು, ಮತ್ತು ಕಣ್ಣು ಕತ್ತೆಲೆಯ ಭಯ ಕಥೆಗಳು ಬನವಾಸಿಯಲ್ಲಿರುವ ಉತ್ತಮ ಕಥೆಗಾರಿಕೆಯ ಉದಾಹರಣೆಗಳಾಗಿವೆ. ಕಥಾವಸ್ತುವಿಗೂ, ಕಥನತಂತ್ರಕ್ಕೂ ಇರಬೇಕಾದ ಸಮನ್ವಯವನ್ನು ಈ ರೀತಿಯ ಕಥೆಗಳು ತೋರಿಸಿಕೊಡುತ್ತವೆ. ಈ ಕಥೆಗಳು ಅವರ ಪ್ರತಿಭೆಯ ಸಾಧ್ಯತೆಗಳನ್ನು ಸೂಚಿಸುತ್ತವೆ. ಅವರ ಬ್ರಿಟಿಷ್ ಬಂಗ್ಲೆ ಸಂಕಲನದ ಎರಡು ಪತ್ರಗಳು ಎನ್ನುವ ಕಥೆ ತಮ್ಮ ಸಾಂಪ್ರದಾಯಿಕ ಕಥನದ ಅಚ್ಚಿನಿಂದ ಭಿನ್ನವಾಗಿ ನಿಲ್ಲುವ ಕಥೆ. ಆದರೆ ಅದು ಒಂದು ಅದ್ಭುತ ಕಥೆಯಾಗದೇ ಉಳಿದುಬಿಡುತ್ತದೆ. ಹೀಗೆ ತಮ್ಮ ಕಥನದಲ್ಲಿ ಸಾಧ್ಯತೆಗಳಿದ್ದೂ ಅದನ್ನು ಸಾಧಿಸಲಾಗದ್ದಕ್ಕೆ ಈ ಕಥೆಯ ಕಟ್ಟುವಿಕೆಯಲ್ಲಿ ಬೇಕಿರುವಷ್ಟು ಸಮನ್ವಯ ಕಾಣದಿರುವುದೇ ಆಗಿದೆ. ಎರಡು ಪತ್ರಗಳು ಕಥೆಯಲ್ಲಿರುವುದು ಇಬ್ಬರ ಆಂತರಿಕ ತುಮುಲಗಳು. ಆ ತುಮುಲಗಳನ್ನು ಪದರಪದರವಾಗಿ ಬಿಡಿಸಿನೋಡಲು ಕೆಲವು ವಿವರಗಳು ಬೇಕು. ಆದರೆ ಕೆಲವು ವಿವರಗಳು ಕಥೆಗೆ ಪೂರಕವಾಗದೇ ಇದ್ದುಬಿಡುತ್ತವೆ. ಆ ಕಥೆಯಲ್ಲಿನ ಶ್ರೀವೈಷ್ಣವ ಸಂಪ್ರದಾಯದ ವಿವರಗಳು ಹೀಗೆ ಕಥೆಗೆ ಪೂರಕವಾಗದೇ ನಿಲ್ಲುವ ವಿವರಗಳಾಗಿವೆ.

ಬನವಾಸಿಯವರು ಬಹುಮಟ್ಟಿಗೆ ಸಾಂಪ್ರದಾಯಿಕ ಕಥನ ತಂತ್ರವನ್ನುಪಯೋಗಿಸುತ್ತಾರೆ. ಇದು ಭಾಷೆಯ-ತಂತ್ರದ ಏರುಪೇರಿಲ್ಲದೇ ನೇರವಾಗಿ ಕಥೆಯನ್ನು ಹೇಳುವ ಮಾರ್ಗದ್ದಾಗಿದೆ. ಒಮ್ಮೊಮ್ಮೆ ಅವರು ಹೇಳಹೊರಟ ಆಧುನಿಕ ಮತ್ತು ಪ್ರಗತಿಶೀಲ ವಿಚಾರಗಳಿಗೂ ಈ ಕಥನ ತಂತ್ರಕ್ಕೂ ಕಥನಕ್ಕೂ ಬೇಕಾದಷ್ಟು ಸಮನ್ವಯತೆಯಿಲ್ಲದ್ದರಿಂದ ಅದು ಏರಬಹುದಾದ ಎತ್ತರವನ್ನು ಕ್ರಮಿಸದೇ ಉಳಿದುಬಿಡುತ್ತದೆ. ಅವರು ಕಥನ ತಂತ್ರದಲ್ಲಿ ಪ್ರಯೋಗಗಳನ್ನು ಮಾಡಿದ್ದಾರಾದರೂ ಅದರಲ್ಲಿ ಆಗಾಗ ಮಾತ್ರ ಸಾಫಲ್ಯತೆಯನ್ನು ಕಾಣುತ್ತಾರೆ. ಹಾಗೆಯೇ ಅವರು ತಮಗೆ ದಕ್ಕದ ಭಿನ್ನ ಅನುಭವಗಳ ವಿವರಗಳನ್ನು ತರಲು ಪ್ರಯತ್ನಿಸಿದಾಗ (ಸಾಬರ ಹುಡುಗಿ, ಆಲ್ಬರ್ಟ್ ಪಿಂಟೋ, ಕನಕಾಂಬರಿಯರು) ಅಷ್ಟು ಯಶಸ್ವಿಯಾಗದಿರುವುದನ್ನು ನಾವು ಕಾಣಬಹುದು.

ಈ ಹಿನ್ನೆಲೆಯಲ್ಲಿ ನಾವು ಅವರ ಹೊಸ ಕಾದಂಬರಿ ಬೇರುಗಮನಿಸಿದಾಗ ನಮಗೆ ಕಾಣಸಿಗುವುದು ಅವರ ಬರಹಗಳಲ್ಲಿ ಉಂಟಾಗುತ್ತಿರುವ ಒಂದು ವಿಚಿತ್ರ ಏಕತಾನತೆ. ನಮ್ಮದೇ ವಸ್ತು, ಶೈಲಿಗಳನ್ನು ನಾವು ಮುರಿಯುತ್ತಾ ಮರುನಿರ್ಮಿಸುತ್ತಾ, ಅನ್ವೇಷಣೆಯ ಮಾರ್ಗದಲ್ಲಿ ಹೋಗದಿದ್ದಾಗ ಆಗಬಹುದಾದ ಪರಿಣಾಮವೇ ಈ ಏಕತಾನತೆ. ಈ ರೀತಿಯ ಏಕತಾನತೆಯನ್ನು ಕೆಲ ವಿಮರ್ಶಕರು ಸ್ವಾಗತಿಸಬಹುದು. ಏಕೆಂದರೆ ಆ ಏಕತಾನತೆಯನ್ನು ಕಂಡಕೂಡಲೇ ಒಂದು ಹಣೆಪಟ್ಟಿಯನ್ನು ಹಚ್ಚಿ ಕೈ ತೊಳೆದುಕೊಂಡುಬಿಡಬಹುದು. ಓದುಗರಿಗೂ, ವಿಮರ್ಶಕರಿಗೂ ಸವಾಲೆಸೆಯುವ, ಪ್ರತಿಯೊಂದು ಸಂಗೀತ ಕಛೇರಿಯಲ್ಲೂ, ಅದೇ ಹಾಡನ್ನು ಹಾಡಿದರೂ ಅದಕ್ಕಾಗಿ ಮತ್ತದೇ ಜನರನ್ನು ಒಂದುಗೂಡಿಸಿ ದಂಗುಬಡಿಸುವ ಕಲಾಕಾರನ ಹಾಗೆ ಒಂದು ರೀತಿಯ ಸವಾಲನ್ನು ಬರಹಗಾರರೂ ಎದುರಿಸಬೇಕಾಗುತ್ತದೆ. ಕವಿತಾಲೋಕದಲ್ಲಿ ರಾಮಾನುಜನ್, ಶಿವಪ್ರಕಾಶ್ ಎಚ್.ಎಸ್. ವೆಂಕಟೇಶಮೂರ್ತಿ, ತಿರುಮಲೇಶ್, ಕಥನದಲ್ಲಿ ಕಾಯ್ಕಿಣಿ, ವಿವೇಕ ಶಾನಭಾಗರಂಥಹ ಬರಹಗಾರರು ಹೊಸ ರೀತಿಯಿಂದ, ಹೊಸ ವಸ್ತುಗಳನ್ನು ಕಟ್ಟುವ ಕೆಲಸವನ್ನು ಮಾಡಿದ್ದಾರೆ. ಈ ದಿಗ್ಗಜರು ನಮಗೊಂದು ಮಾನದಂಡವಾಗಿ ನಿಲ್ಲುತ್ತಾರೆ.

ಕಾದಂಬರಿಯು ಬರೆಯಿಸಿಕೊಂಡು ಹೋಗುವುದಕ್ಕೂ ಕಾದಂಬರಿಯನ್ನು ಕಟ್ಟುವುದಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ನಾವು ಕಾಣಬೇಕು. ಕಾದಂಬರಿಗೆ ಒಬ್ಬ ಲೇಖಕ ತನ್ನನ್ನೇ ಒಡ್ಡಿಕೊಳ್ಳಬೇಕೋ, ಅಥವಾ ತನ್ನ ಬರಹದ ಪ್ರತಿಭೆಯಿಂದ ಕಾದಂಬರಿಯನ್ನು ಒಂದು ವಿಶಿಷ್ಟ ಹದಕ್ಕೆ ತರಬೇಕೋ ಎನ್ನುವ ಪ್ರಶ್ನೆ ನಮ್ಮನ್ನು ಕಾಡಬೇಕು. ಕಾದಂಬರಿ ಅಥವಾ ಕಥನಕ್ಕೆ ಲೇಖಕ ತನ್ನನ್ನು ಒಡ್ಡಿಕೊಂಡಾಗ ಒಂದು ರೀತಿಯ ಜಡತ್ವ ಬರುತ್ತದೆ. ಆದರೆ ಅದನ್ನು ಹದ ಮಾಡುತ್ತೇನೆಂದು ಹೊರಟಾಗ ನವ್ಯತೆ ಮತ್ತು ಭಿನ್ನತೆಗಳು ಹೊರಬರುವ ಸಾಧ್ಯತೆಯಿದೆ. ಬನವಾಸಿಯವರನ್ನು ಓದಿದಾಗ – ಅವರ ಪ್ರಗತಿಯನ್ನು ನೋಡಿದಾಗ ಅವರಿಗೆ ದಕ್ಕಿರುವ ಕಥನತಂತ್ರದ ಅಚ್ಚಿನಲ್ಲಿ ಕಥೆಗಳನ್ನು ಎರಕಹೊಯ್ದು ತೃಪ್ತರಾಗುತ್ತಿದ್ದಾರೆಯೇ ಹೊರತು ಅದಕ್ಕೊಂದು ಹದವನ್ನು ತರಲು ವಿಶೇಷ ಪ್ರಯತ್ನವನ್ನು ಮಾಡುತ್ತಿಲ್ಲ, ಕಥೆಗಳನ್ನು – ಅದು ಕಾದಂಬರಿಯೇ ಆಗಿರಬಹುದು – ಹೊಸದಾಗಿ ಒಂದು ಹೊಸ ಶಿಲ್ಪಕಲಾಕೃತಿಯಂತೆ ಕೆತ್ತಿ ರೂಪಿಸುವ ಸವಾಲನ್ನು ಅವರು ಸ್ವೀಕರಿಸಿಲ್ಲ ಎನ್ನಿಸುತ್ತದೆ.

ಒಬ್ಬ ಸಮರ್ಥ ಬರಹಗಾರನು ವಸ್ತುವಿನ ಭಿನ್ನತೆಯನ್ನು ಶೋಧಿಸಿದಷ್ಟು ತೀವ್ರತೆಯಿಂದ ತಂತ್ರದ ವೈವಿಧ್ಯವನ್ನೂ ಕಂಡುಕೊಳ್ಳುತ್ತಾನೆ ಎಂದು ನಾನು ನಂಬಿದ್ದೇನೆ. ಅಷ್ಟೇ ಅಲ್ಲ, ಒಂದೊಂದು ಕಥನಕ್ಕೂ ಅದಕ್ಕೆ ಸಮರ್ಪಕವಾದ ಕಥನತಂತ್ರವನ್ನು ಆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಬನವಾಸಿಯವರ ಪ್ರತಿಭೆಯ ಸಂಭಾವ್ಯತೆಯ ಅಷ್ಟೂ ಆಯಾಮಗಳನ್ನು ಅವರು ಪರಿಶೋಧಿಸುವ ಕೆಲಸ ಮಾಡದೇ, ಅಲ್ಪತೃಪ್ತರಾಗುತ್ತಿದ್ದಾರೇನೋ ಅನ್ನಿಸುತ್ತದೆ. ಇದು ಕೇವಲ ಬನವಾಸಿಯವರಿಗೆ ಅನ್ವಯವಾಗುವ ಟಿಪ್ಪಣಿಯಲ್ಲ. ಬದಲಿಗೆ ಯುವ ಬರಹಗಾರರು ಕಂಡುಕೊಳ್ಳಬೇಕಾದ ಒಂದೇ ಪುಸ್ತಕಕ್ಕೆ ದಕ್ಕುವ ತುರ್ತಿನ ಮೆಚ್ಚುಗೆ ಮತ್ತು ತಮ್ಮ ಒಟ್ಟಾರೆ ಸಾಹಿತ್ಯಯಾತ್ರೆಯ ಮಹತ್ವದ ಅವಲೋಕನದ ನಡುವಿನ ದ್ವಂದ್ವವಾಗುತ್ತದೆ. ನಾನು ನಿನ್ನ ಬರಹವನ್ನು ಓದಿದ್ದೇನೆ ಎಂದು ಸೂಚಿಸುತ್ತಾ ಒತ್ತುವ ಲೈಕ್ ಗುಂಡಿಯನ್ನು ಮೆಚ್ಚುಗೆ ಎಂದು ಪರಿಭಾವಿಸಿದರೆ – ಈ ಲೈಕು ಅನ್ಲೈಕುಗಳ ಬೈನರಿಯ ನಡುವೆ ನಷ್ಟವಾಗುತ್ತಿರುವ ಚರ್ಚೆಯ ಸಂಕೀರ್ಣತೆಯನ್ನು ಕಳೆದುಕೊಂಡಂತಾಗುತ್ತದೆ. ಅದು ಬಹಳ ದೊಡ್ಡ ನಷ್ಟವೇ ಸರಿ.

ಈ ವಿಷಯವನ್ನು ಮತ್ತು ಎಚ್ಚರವನ್ನು ಕೇಶವ ಮಳಗಿ ಅವರ ದೇವರ ಜೋಳಿಗೆ ಪುಸ್ತಕದ ಮುನ್ನುಡಿಯಲ್ಲಿ ನೀಡುತ್ತಾರೆ. ಕಥಾವಸ್ತುವನ್ನು ಹುಡುಕಿಕೊಂಡು ಹೋಗುವ ಮತ್ತು ಕಥೆ ಕಟ್ಟುವ ವಿಧಾನ ಬಲ್ಲ ಫಕಿರರಂಥ ತರುಣ ಬರಹಗಾರರು ಗಮನಿಸಬೇಕಾದ ಕೆಲವು ಅಂಶಗಳಿವೆ.......... ಕಥೆಗಾರನ ಮಾಗಿದ ಜೀವನಾನುಭವ, ತೆರೆದ ಮನಸ್ಸು, ಕರುಣೆ, ಎಚ್ಚರವಾಗಿರುವ ಒಳ ಕಣ್ಣು ಕಥೆಯನ್ನು ಮೇಲೆತ್ತಬಲ್ಲವು. ಕಥೆಯನ್ನು ನಡೆಸುವ ಸಲುಗೆ ಮಾತ್ರ ಕಥೆಗಾರನಿಗಿರುತ್ತದೆ. ಕಾಣ್ಕೆ ಕಥೆಯೊಳಗಿನಿಂದಲೇ ಕೃಪೆಯಂತೆ ಒದಗಿಬರುತ್ತದೆ......ಅತಿ ವಿವರಣೆ, ಮಧ್ಯೆ ಮಧ್ಯೆ ಕಥೆಯನ್ನು ಉಪ ಪ್ರಸಂಗಗಳ ಮೂಲಕ ಬೆಳೆಸುವುದು ಓದು ಮತ್ತು ಕಥೆಯ ಯಶಸ್ಸಿಗೆ ತೊಡಕಾಗಬಲ್ಲದು.

ಬೇರು ಕಾದಂಬರಿಯಲ್ಲಿ ಮೂರು ಭಿನ್ನ ಕಥೆಗಳ ಎಳೆಗಳಿವೆ. ಅವುಗಳಲ್ಲಿ ಎರಡು ಮುಖ್ಯ ಧಾರೆಗಳಾದರೆ, ಮತ್ತೊಂದು ಉಪಧಾರೆ ಎನ್ನಬಹುದು. ಕುಂತಮ್ಮ-ಸಂಧ್ಯಾ ಸುತ್ತ ಒಂದು ಕಥೆ ಹುಟ್ಟಿದರೆ, ಈರಮ್ಮ ಭರಮಪ್ಪನದು ಮತ್ತೊಂದು. ಮೂರನೆಯ ಉಪಧಾರೆ ಬಾಬುರಾವ್ ನಚಿಕೇತನ ಕಥೆ. ಈ ಮೂರೂ ಕಥೆಗಳನ್ನು ಬನವಾಸಿಯವರು ತಮ್ಮ ಕಥನದ ಅಚ್ಚಿನಲ್ಲಿ ಎರಕ ಹೊಯ್ಯುತ್ತಾರೆಯೇ ಹೊರತು ಹೊಸ ಅಚ್ಚನ್ನು ತಯಾರಿಸುವುದಿಲ್ಲ. ಹೀಗಾಗಿ ಅವು ಮೂರು ಭಿನ್ನ ಕಥೆಗಳಾಗಿ ನಿಲ್ಲುತ್ತವೆ. ಅ ಕಥೆಗಳಿಗೆ ಒಂದು ನಿರ್ದಿಷ್ಟ ಚೌಕಟ್ಟಿದೆ. ಒಂದು ಬದಿಯಲ್ಲಿ ಪ್ರಾರಂಭವಾಗಿ ಆರೋಹಣಾವರೋಹಣಗಳ ನಂತರ ನಿಲ್ಲುತ್ತದೆ. ಹೀಗಾಗಿ ಅವು ಕಥೆಗಳಾಗಿ ಉಳಿಯುತ್ತವೆಯೇ ಹೊರತು ಕಾದಂಬರಿಯ ಫಾರ್ಮಾಟಿಗೆ ಅಳವಡಿಸುವಲ್ಲಿ ಲೇಖರು ಹೆಚ್ಚಿನ ಸಾಫಲ್ಯತೆಯನ್ನು ಪಡೆಯುವುದಿಲ್ಲ.

ಈ ಎರಡೂವರೆ ಕಥೆಗಳು ನಡೆಯುವುದು ಕರುಣಾಶ್ರಯ ಎನ್ನುವ ಒಂದು ಆಸ್ಪತ್ರೆಯಲ್ಲಿ. ಎರಡೂ ಕಥೆಗಳಲ್ಲಿ (ಎಲ್ಲ ಸೂಕ್ಷ್ಮ ವಿವರಗಳನ್ನು ಮೀರಿದಾಗ) ಕಾಣುವುದು ಚಿಕಿತ್ಸೆಗೆ ಬೇಕಾದ ಹಣದ ಪ್ರಶ್ನೆ. ಒಂದಕ್ಕೆ ದೇಣಿಗೆಯ ಸುಲಭ ಉತ್ತರ ಸಿಗುತ್ತದೆ. ಮತ್ತೊಂದಕ್ಕೆ ದೇಹ ಮಾರಿಕೊಳ್ಳಬೇಕಾದ ಕಷ್ಟದ ಆಯ್ಕೆಯೇ ಉಳಿಯುತ್ತದೆ. ಈ ಎರಡೂ ಪ್ರಕ್ರಿಯೆಗಳು ಒಂದೇ ಆಸ್ಪತ್ರೆಯ ಎರಡು ಭಾಗದಲ್ಲಿ ಆಗುತ್ತಿದೆ. ಆದರೆ ಈರವ್ವನಿಗೆ ಯಾರೂ ದೇಣಿಗೆ, ಎನ್.ಜಿ.ಓಗಳ ಆಯ್ಕೆಯ ಬಗ್ಗೆ ತಿಳುವಳಿಕೆಯನ್ನು ನೀಡುವುದೇ ಇಲ್ಲ. ಇಲ್ಲಿಯೇ ಲೇಖಕರು ಕಾದಂಬರಿಯ ವಿಸ್ತಾರವಾದ ಫಾರ್ಮಾಟನ್ನು ದಕ್ಕಿಸಿಕೊಳ್ಳುವುದರಲ್ಲಿ ಸೋಲುತ್ತಾರೆ. ಇನ್ನೂರು ಪುಟಗಳಷ್ಟು ದೀರ್ಘವಾಗಿ ಬರೆಯುವ ಸಾಧ್ಯತೆಯಿರುವಾಗ ಅಷ್ಟೂ ಸಂಕೀರ್ಣತೆಯನ್ನು ಅಳವಡಿಸುವ ಸಾಧ್ಯತೆ ಇದ್ದೇ ಇದೆಯಾದರೂ ಅದರ ಸಾಧ್ಯತೆಗಳನ್ನು ಅವಸರದಲ್ಲಿ ಬಿಟ್ಟುಕೊಟ್ಟುಬಿಟ್ಟಿದ್ದಾರೆ ಅನ್ನಿಸುತ್ತದೆ.

ಹಾಗೆ ನೋಡಿದರೆ ಬನವಾಸಿಯವರ ಕಥಾವಸ್ತುವನ ಆಯ್ಕೆ ನಿಜಕ್ಕೂ ಮೆಚ್ಚುವಂತಹದ್ದೇ. ಈ ಕಾದಂಬರಿಯಲ್ಲಿಯೇ ಪ್ರಾಸ್ತಾವಿಕವಾಗಿ – ಅಸ್ಪತ್ರೆಗೆ ಈ ಇಬ್ಬರು ವ್ಯಕ್ತಿಗಳು ಚಿಕಿತ್ಸೆಗಾಗಿ ಬರುವುದಕ್ಕೆ ಕಾರಣ – ಎಂಡೋಸಲ್ಫಾನ್ ಪ್ರಭಾವದಿಂದ ಕಾಲಿಗೆ ಆಗಿರುವ ನ್ಯೂನತೆ ಒಂದಾದರೆ, ಭರಮಪ್ಪನ ವಿಷಯದಲ್ಲಿ ಬಿಟಿ ಹತ್ತಿ ಬೆಳೆಯುವ – ರೈತರ ಪ್ರತಿಭಟನೆಯ ಬ್ಯಾಕ್ ಸ್ಟೋರಿ ಇದೆ. ಎರಡೂ ಶಕ್ತವಾದ ಕಥೆಗಳೇ. ಎರಡೂ ವಿಸ್ತಾರವಾದ ಕ್ಯಾನ್ವಾಸಿನ, ಮಹತ್ವದ ಸಮಾಜಾಭಿಮುಖವಾದ ಕಥೆಗಳು. ಆದರೆ ಅವು ಕೇವಲ ಪ್ರಾಸಂಗಿಕವಾಗಿ ಉಳಿದುಬಿಡುತ್ತವೆ.

ಬನವಾಸಿಯವರ ಈ ಕಥನದಲ್ಲಿ ಖಳನಾಯಕರಾಗಿ ನಮಗೆ ಯಾರೂ ಕಾಣುವುದಿಲ್ಲ. ಅದರಲ್ಲಿ ನಮಗೆ ಏನೂ ತಕರಾರು ಇರಬಾರದು. ಯಾಕೆಂದರೆ ನಮ್ಮೆಲ್ಲರಲ್ಲೂ ಒಳ್ಳೆಯ ಮತ್ತು ಕೆಟ್ಟ ಅಂಶಗಳು ಅಡಕವಾಗಿರುತ್ತವೆ. ಆದರೆ ಬನವಾಸಿಯವರು ಒಂದೇ ಸಮಯದಲ್ಲಿ ಜನರ ಒಳ್ಳೆಯತನ-ಕ್ಷುಲ್ಲಕತೆಯನ್ನು ನೋಡುವ ಬದಲಿಗೆ, ಒಂದು ಕಾಲಘಟ್ಟದಲ್ಲಿ ಕೆಲವರು ಕೆಟ್ಟವರಾಗಿ ಕಂಡು, ಇದ್ದಕ್ಕಿದ್ದ ಹಾಗೆ ಒಳ್ಳೆಯವರಾಗಿ ಪರಿವರ್ತಿತರಾಗುತ್ತಾರೆ. ಈ ಪರಿವರ್ತನೆಯಲ್ಲಿ ಕೆಟ್ಟವರು ಒಳ್ಳೆಯವರಾಗುವ ಪ್ರಕ್ರಿಯೆಗಿಂತ, ಅದೇ ವ್ಯಕ್ತಿಯನ್ನು ನೋಡುವ ದೃಕ್ಪಥದ ಬದಲಾವಣೆಯಿಂದಾಗಿ ಚಿತ್ರಣ ಭಿನ್ನವಾಗುತ್ತದೆ. ಇದೂ ಒಂದು ಆಸಕ್ತಿಕರ ತಂತ್ರವಾದರೂ, ಈ ದೃಕ್ಪಥದ ಬದಲಾವಣೆಗೆ ಬಲವಾದ ಸಂದರ್ಭವನ್ನು ಒದಗಿಸುವಲ್ಲಿ ಬನವಾಸಿಯವರು ಅಷ್ಟು ಶಕ್ತರಾಗಿಲ್ಲ. ಉದಾಹರಣೆಗೆ ರಾಮಸ್ವಾಮಿ ಎನ್ನುವ ಪಾತ್ರಕ್ಕಿರಬಹುದಾದ ಸಾಧ್ಯತೆಗಳು ಈ ಕಾಲಘಟ್ಟದ ಬೈನರಿಯಲ್ಲಿ ನಲುಗುತ್ತದೆಯೇ ಹೊರತು ತನ್ನೆಲ್ಲಾ ಸಂಕೀರ್ಣತೆಯನ್ನು ಓದುಗರ ಮುಂದೆ ತೆರೆದಡುವುದಿಲ್ಲ. ಹೀಗಾಗಿಯೇ ಕಥೆಯಲ್ಲಿ ಬರುವ ಆಸ್ಪತ್ರೆಯಲ್ಲಿನ ಜನರ ಒಳ್ಳೆಯತನದಲ್ಲಿ ಈ ಕಾದಂಬರಿ ನಲುಗುತ್ತದೆ.

ಹಾಗೆ ನೋಡಿದರೆ ಕಾದಂಬರಿಯ ಈರಮ್ಮನ ಪಾತ್ರ ಬಹಳ ಮುಖ್ಯವಾದ ಪಾತ್ರವಾಗಬಹುದಿತ್ತು. ಆಕೆಗೆ ಹಣದ ಅವಶ್ಯಕತೆ ಒಂದೆಡೆಯಿದೆ, ದೈಹಿಕ ಸುಖದ ಅವಶ್ಯಕತೆಯೂ ಇದೆ. ಪಕ್ಕದಲ್ಲಿ ಚಿಕಿತ್ಸೆಗಾಗಿ ಗಂಡ ಅಸಹಾಯಕನಾಗಿ ಆಸ್ಪತ್ರೆಯಲ್ಲಿ ಮಲಗಿದ್ದಾನೆ.... ಈ ಹಿನ್ನಲೆಯಲ್ಲಿ ಈರಮ್ಮನ ಮನಸ್ಸಿನಲ್ಲಾಗಬಹುದಾದ ತುಮುಲಗಳು ಆಯ್ಕೆಯ ಸಾಧ್ಯತೆಗಳು ಅದರಲ್ಲಿನ ಸಂಕೀರ್ಣತೆಯ ಸಾಧ್ಯತೆಗಳು ಅಪರಿಮಿತ. ಆದರೆ ಬನವಾಸಿಯವರು ಅದನ್ನು ಒಂದು ಮಟ್ಟದಲ್ಲಿ ಸಮರ್ಥಿಸಿ ಬಿಟ್ಟುಬಿಡುತ್ತಾರೆ. ಅದನ್ನೊಂದು ಸಮಸ್ಯೆಯಾಗಿ ಬಳೆಸುವ ಸಾಧ್ಯತೆಯನ್ನು ಇನ್ನಷ್ಟು ಶಕ್ತವಾಗಿ ಉಪಯೋಗಿಸಿಕೊಳ್ಳಬಹುದಿತ್ತು ಅನ್ನಿಸುತ್ತದೆ. ಬದಲಿಗೆ ಈ ವಿಷಯ ಬೆಳೆದು ತಾರಕ್ಕಕೇರಬೇಕಾದದ್ದು ಸಮಜಾಯಿಷಿಯಲ್ಲಿ ಮತ್ತು ಒಂದು ರೀತಿಯ ಒಣ ಒಪ್ಪಂದದಲ್ಲಿ ಮುಕ್ತಾಯಗೊಳ್ಳುತ್ತದೆ. ಅನೇಕ ಪದರಗಳಿರಬಹುದಾದ ಸಮಸ್ಯೆಗೆ ಅವರು ಸರಳವಾಗಿ ಒಂದು ತೆರೆಯನ್ನು ಎಳೆದು ಬಿಡುತ್ತಾರೆ.

ಹಿಂದೆ ಚರ್ಚಿಸಿದ ಎರಡು ಪತ್ರಗಳು ಕಥೆಯಲ್ಲಿ ಬರುವ ಶ್ರೀವೈಷ್ಣವ ಸಂಪ್ರದಾಯದ ವಿವರಗಳ ಡಿಸ್ಟ್ರಾಕ್ಟಿವ್ ಅಂಶಗಳ ರೀತಿಯ ಅಂಶಗಳು ಈ ಕಾದಂಬರಿಯಲ್ಲಿಯೂ ಇವೆ. ಪ್ರಾಸ್ತಾವಿಕವಾಗಿ ಬರುವ ಒಂದು ಪಾತ್ರ ಫ್ಲಾರೆನ್ಸ್ ನೈಟಿಂಗೇಲ್. ಇದು ಸಾಮಾನ್ಯವಾದ ಹೆಸರಲ್ಲ. ಈ ಹೆಸರಿನಲ್ಲಿ ಯುದ್ದಕಾಲದ ಶುಶ್ರೂಶೆಗೂ, ನರ್ಸಿಂಗಿಗೂ ಸಂಬಂಧಿಸಿದ ಒಂದು ಪ್ರತೀಕವೇ ಅಡಕವಾಗಿದೆ. ಆದರೆ ಈ ಕಾದಂಬರಿಯು ಆಸ್ಪತ್ರೆಯ ಸಂದರ್ಭದಲ್ಲಿ ರಚಿಸಿದ್ದರೂ, ಆ ಪಾತ್ರಕ್ಕೂ ಅದು ಸ್ಫುರಿಸಬಹುದಾದ ಅರ್ಥಕ್ಕೂ ಯಾವುದೇ ತಾಳೆಬೀಳದೇ ಆ ಹೆಸರನ್ನು ಇಲ್ಲಿಗೆ ತಂದದ್ದು ಯಾಕೆ ಅನ್ನುವ ಪ್ರಶ್ನೆಯ ಕೊಕ್ಕೆಯನ್ನು ಹಾಕಿ ಬನವಾಸಿಯವರು ಓದುಗನಿಗೆ ತುಮುಲವನ್ನುಂಟುಮಾಡುತ್ತಾರೆ. ಇಂಥ ಅಂಶಗಳು ಓದುಗರ ಚಿತ್ತವಿಕ್ಷೇಪಕ್ಕೆ ಕಾರಣವಾಗುತ್ತದೆ. ಇದರ ಬಗ್ಗೆ ಅವರು ತುಸು ಎಚ್ಚರ ವಹಿಸಬೇಕಾಗಿದೆ.

ಬೇರು ಕಾದಂಬರಿಯನಂತರ ಬನವಾಸಿಯವರು ತಮ್ಮ ಮುಂದಿನ ಕಥಾಯಾತ್ರೆಯನ್ನು ಭಿನ್ನವಾಗಿ ಕೈಗೊಳ್ಳಲಿ ಎಂದು ನಾನು ಆಶಿಸುತ್ತೇನೆ. ಬೇರು ಒಂದು ಸಮರ್ಥವಾದ ಬರವಣಿಗೆಯ ಫಲವಾಗಿದೆ. ಆದರಿದು ಇನ್ನೂ ಮಹತ್ವಾಕಾಂಕ್ಷೆಯ ಕಾದಂಬರಿಯಾಗಬಹುದಿತ್ತು. ಬನವಾಸಿಯವರು ಕಥೆ-ತಂತ್ರದ ಸಮನ್ವಯದಬಗ್ಗೆ ಅಭ್ಯಾಸ ಮಾಡಿದರೆ ಕನ್ನಡದ ಮುಖ್ಯ ಲೇಖಕರಾಗುವುದರ ಎಲ್ಲ ಸಾಧ್ಯತೆಗಳೂ ಇವೆ ಅಂತ ನನಗನ್ನಿಸುತ್ತದೆ. ಇದು ಕೇವಲ ಬನವಾಸಿಯವರಿಗೆ ಮಾತ್ರ ಅನ್ವಯಿಸುವ ಮಾತಲ್ಲ, ಬದಲಿಗೆ ಹೊಸದಾಗಿ ಬರೆಯಲು ಪ್ರಾರಂಭಿಸಿದ ಎಲ್ಲ ಯುವ ಬರಹಗಾರರೂ ತಮ್ಮ ಮೊದಲ ಪುಸ್ತಕ ಬಂದನಂತರ ಯೋಚಿಸಿ ಮೈಗೂಡಿಸಿಕೊಳ್ಳಬೇಕಾದ ವಿಚಾರ. ಬನವಾಸಿಯವರ ಮುಂದಿನ ಕೃತಿಗಳು ಈ ಹದವನ್ನು ಸಾಧಿಸುತ್ತವೆ ಎನ್ನುವ ಆಶಾವಾದ ನನಗಿದೆ. ಅವರಿಗೆ ಒಳ್ಳೆಯದಾಗಲಿ.

ಎಂ.ಎಸ್.ಶ್ರೀರಾಮ್
ಬೆಂಗಳೂರು. 22 ಡಿಸೆಂಬರ್ 2017.



   

No comments:

Post a Comment