Sunday, February 4, 2018

ಗೋಪಾಲಕೃಷ್ಣ ಕುಂಟಿನಿಯ ಕಥೆಗಳಿಗೆ ಮುನ್ನುಡಿ


ಹೊಸದಾಗಿ ಬರುತ್ತಿರುವ ಕೃತಿಯನ್ನು ಸ್ವಾಗತಿಸುವಾಗ ಅದಕ್ಕೊಂದು ಹಿನ್ನೆಲೆ – ಯಾವ ಪರಂಪರೆಗೆ ಕಥೆಗಳು ಸೇರುತ್ತವೆ, ಹಾಗೂ ಕಥನ ಜಗತ್ತನ್ನು ಇದು ಹೇಗೆ ಪ್ರವೇಶಿಸುತ್ತದೆ ಎಂದು ಗಮನಿಸುವುದು ಮುಖ್ಯವಾಗುತ್ತದೆ. ಒಂದು ರೀತಿಯಲ್ಲಿ ಕಥೆಗಾರನ ಹಿನ್ನೆಲೆ, ನಿಲುವುಗಳು, ಓದು, ಅಭಿರುಚಿಗಳ ಪರಿಚಯವನ್ನೂ ಕಥೆಗಳ ಮೂಲಕ ಕಂಡುಕೊಳ್ಳುವುದು, ಆ ಒಲವುಗಳ ಬಗ್ಗೆ ಟಿಪ್ಪಣಿ ಮಾಡುವುದಕ್ಕೂ ಸಾಧ್ಯ. ಅನೇಕರು ಕೈಗೆ ದಕ್ಕದ ಕಥೆಗಳನ್ನು ಬರೆದು ಅದನ್ನು ಓದುಗ ವಿಸ್ತರಿಸಲು ಅದರ ಪದರಗಳನ್ನು ಬಿಡಿಸುತ್ತಾ ಹೋಗಲು ಪಂಥಾಹ್ವಾನ ನೀಡುವುದನ್ನೂ ನಾವು ಕಂಡಿದ್ದೇವೆ. ಕಥೆ ಎಂದರೇನು ಎನ್ನುವ ಮೂಲಭೂತ ಪ್ರಶ್ನೆಯನ್ನೂ ಕೆಲ ಕಥೆಗಾರರು ತಮ್ಮ ಓದುಗರತ್ತ ಎಸೆಯುವ ಕಥೆಗಾರರು ಕಥನ ತಂತ್ರವೂ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ನಾವು ಕುಂಟಿನಿಯವರ ಪುಸ್ತಕವನ್ನು ಪ್ರೀತಿಯಿಂದ ಸ್ವಾಗತಿಸಬೇಕಾಗಿದೆ.

ಹಾಗೆ ನೋಡಿದರೆ ಗೋಪಾಲಕೃಷ್ಣ ಕುಂಟಿನಿಯವರ ಕಥೆಗಳನ್ನು ಪರಿಚಯಿಸುವುದು ಸರಳವಾದ ಕೆಲಸವೇನೂ ಅಲ್ಲ. ಮುಂಬಯಿಯ ಒಂದು ಹೋಟೇಲಿನ ರಿಸೆಪ್ಷನ್ ಏರಿಯಾದಲ್ಲಿ 30 ಅಡಿ ಅಗಲದ ಒಂದು ಚಿತ್ರಕಲೆಯಿದೆ. ಮುಂಬಿಯಲ್ಲಿ ನಡೆದ ಭಯೋತ್ಪಾದಕರ ಕಾರ್ಯಾಚರಣೆಯಾದಾಗಲೂ ಆ ಚಿತ್ರಕ್ಕೆ ಯಾವುದೇ ಧಕ್ಕೆ ಆಗಲಿಲ್ಲ. ಅದರ ಕಲಾವಿದರು ಎಂ.ಎಫ್.ಹುಸೇನ್ ಆ ಹೋಟೇಲನ್ನು ಪ್ರವೇಶಿಸಿ ಚೆಕಿನ್ ಮಾಡುವಾಗ ಎಂದೂ ಇಡೀ ಚಿತ್ರ ನಮಗೆ ಕಾಣುವುದೇ ಇಲ್ಲ. ಯಾವ ಭಾಗದಲ್ಲಿ ನಿಂತು ನೋಡುತ್ತೀರೋ ಆ ಭಾಗ ವಿವರವಾಗಿ ಕಾಣುತ್ತದೆ. ಆದರೆ ಆ ವಿವರವಿರುವುದು ಒಂದು ದೊಡ್ಡ ಕ್ಯಾನ್ವಾಸಿನ ಭಾಗವಾಗಿ. ಆ ಕ್ಯಾನ್ವಾಸು ಕಾಣಬೇಕಾದರೆ ಮೂವತ್ತು ಅಡಿ ದೂರ ನಿಂತು ನೋಡಬೇಕು. ಹಾಗೆ ನೋಡಿದಾಗ ಕಾಣುವ ಚಿತ್ರವೇ ಬೇರೆ. ಅಲ್ಲಿ ವಿವರಗಳು ಕಾಣುವುದೇ ಇಲ್ಲ. ಕ್ಲೋಸಪ್ ಕೊಡುವ ಕಥೆ, ವಿವರ, ಒಳನೋಟಗಳು ಒಂದಾದರೆ, ಲಾಂಗ್ ಷಾಟ್ ಕೊಡುವ ವಿಹಂಗಮ ದೃಕ್ಪಥವೇ ಮತ್ತೊಂದು. ಈ ಎರಡನ್ನೂ ಗಿಟ್ಟಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಆದರೆ ಗಿಟ್ಟಿಸಿಕೊಳ್ಳಲು ಮಾಡುವ ಯತ್ನಮಾತ್ರ ನಿಜಕ್ಕೂ ಚೇತೋಹಾರಿಯಾದದ್ದು. ನಮ್ಮನ್ನು ಆಲೋಚನೆಯ ಓರೆಗೆ ಹಚ್ಚುವ ಯಾವುದೇ ಕೃತಿಯನ್ನು ನಾವು ತೆರೆದ ಮನಸ್ಸಿನಿಂದ, ಪ್ರೀತಿಪೂರ್ವಕವಾಗಿ ಸ್ವಾಗತಿಸಬೇಕು.
ಸಾಮಾನ್ಯವಾಗಿ ಪುಸ್ತಕವನ್ನು ಪರಿಚಯಿಸುವಾಗ ಅದರ ಭೌತಿಕತೆಯನ್ನು ಮತ್ತು ಕಥೆ, ಕಥನ ಧೋರಣೆಯ ಸಾರಾಂಶವನ್ನು ಹೇಳುವುದು ವಾಡಿಕೆ – ಈ ಪುಸ್ತಕದಲ್ಲಿ 30 ಕಥೆಗಳಿವೆ, ಆ ಕಥೆಗಳನ್ನು ಸಂಕ್ಷಿಪ್ತವಾಗಿ ವಿವರಿಸಬೇಕೆಂದರೆ ಅವು ನಗರದ ತಲ್ಲಣಗಳನ್ನು ಪ್ರತಿಪಾದಿಸುತ್ತವೆ, ಅಥವಾ ಶೋಷಿತ ವರ್ಗದ ತುಮುಲಗಳ ಚಿತ್ರಣ ನೀಡುತ್ತದೆ, ಗ್ರಾಮ್ಯ ನಗರಗಳ ಆತಂಕವನ್ನು ಬಿಂಬಿಸುತ್ತದೆ ..... ಹೀಗೆ ಬರೆಯುವುದು ವಾಡಿಕೆ. ಆದರೆ ಕುಂಟಿನಿಯವರ ಕಥೆಗಳನ್ನು ಹಾಗೆ ಓದುವ ಪ್ರಯಾಸ ಮಾಡಲೇ ಬಾರದು. ಕಥೆಯ ಸಾರಾಂಶವನ್ನು ಹುಡುಕಲೇ ಬಾರದು. ಹಾಗೂ ಕಥೆ ಓದಿ ಮುಗಿಯಿತು – ಈ ಪುಸ್ತಕವನ್ನು ಓದಿ ಮುಗಿಸಿದೆ ಎಂದು ಹೇಳಲೇ ಬಾರದು. ಯಾಕಂದರೆ ಅಲ್ಲಿ ಕಥೆಗಳೇ ಇಲ್ಲ! ಅಲ್ಲಿರುವುದು ಅನೇಕ ಸಣ್ಣ ವಿಚಾರಗಳ ವಿವರವಾದ ನೋಟ.... ಆ ವಿವರಗಳಲ್ಲಿ ಒಂದು ಅರ್ಥ ಸ್ಫುರಿಸುತ್ತದೆ. ಆ ವಿವರಗಳಿಂದ ದೂರ ಹೋದಾಗ ಬೇರೆಯದೇ ಒಂದು ವಿಹಂಗಮ ದೃಶ್ಯ ಮತ್ತು ದೊಡ್ಡ ದೃಶ್ಯ ಕಾಣಿಸುತ್ತದೆ. ಅಂದರೆ ಕುಂಟಿನಿಯವರು ನಮಗೆ 30 ಕಥೆಗಳನ್ನು ನೀಡಿದ್ದಾರೆಂದು ಅವರು ತಿಳಿದಿದ್ದಾರೆ. ಅಲ್ಲಿರುವ ನಿರರ್ಗಳ ಕಥನವನ್ನು ಅವರು ಮುರಿದಿರುವ ರೀತಿಯಿಂದಾಗಿ ಅಲ್ಲಿ 30 ಕಥೆಗಳಿವೆ. ಆದರೆ ಅದರಲ್ಲಿ ನಾವು ಬೇಕಿದ್ದರೆ 20 ಕಥೆಗಳನ್ನೇ ಓದಬಹುದು, ಅಥವಾ ಮುರಿದು 40 ಕಥೆಗಳನ್ನೂ ಆಗಿಸಬಹುದು. ಅದು ಓದುಗರ ಪ್ರೀತಿಗೆ, ಓದುವ ಶೈಲಿಗೆ ಬಿಟ್ಟದ್ದು.

ಈ ಕಥೆಗಳ ಶೈಲಿ ಕನ್ನಡಕ್ಕೆ ಹೊಸತು. ಇದು ವಿಶಿಷ್ಟವಾದದ್ದು. ಒಂದು ಕಥೆಗೆ ಸಾಮಾನ್ಯವಾಗಿ ಅದರ ಸಂದರ್ಭವನ್ನು ದಿಗ್ಬಂಧನದಲ್ಲಿಡುವ ಕೆಲವು ಗಡಿಗಳಿರುತ್ತವೆ. ಆ ಗಡಿಗಳು ಕಾಲಕ್ಕೆ ಸಂಬಂಧಪಟ್ಟವು, ಸಮಯ-ಸಂದರ್ಭಕ್ಕೆ ಸಂಬಂಧಪಟ್ಟವು, ಭೌಗೋಳಿಕ ವಿವರಗಳಿಗೆ ಸಂಬಂಧಪಟ್ಟವು, ಒಂದು ಸಾಮಾಜಿಕ ಪರಿಸರಕ್ಕೆ ಸಂಬಂಧಪಟ್ಟವು ಆಗಿರುತ್ತದೆ. ಸಾಮಾನ್ಯವಾಗಿ ಒಂದು ಕಥೆಯನ್ನು ಕಟ್ಟುವಾಗ ಆ ಸಂದರ್ಭದ ಚೌಕಟ್ಟು ಹಾಕಿ ಬರೆಯುವುದೇ ಕಥೆಗಾರರಿಗೆ ಅನುಕೂಲವಾದ ತಂತ್ರ. ಮುಂಬಯಿ ನಗರೀಕರಣದ ಒಂದು ಸಹಜ ಭಿತ್ತಿಯಾಗುತ್ತದೆ. ಪಾತ್ರದ ಹೆಸರುಗಳು ಒಂದು ರೀತಿಯ ಸಾಮಾಜಿಕ ಚೌಕಟ್ಟನ್ನು ಬಿಟ್ಟುಕೊಡುತ್ತದೆ. ಹೊರವಿವರಗಳು ಒಂದು ಕಾಲಘಟ್ಟವನ್ನು ತೆರೆಯುತ್ತವೆ. ಟ್ರಂಕಾಲ್ ಹಚ್ಚಿದೆ ಎನ್ನುವುದು ಒಂದು ಕಾಲಘಟ್ಟವಾದರೆ ವಾಟ್ಸಾಪ್ ಮಾಡಿದೆ ಎನ್ನುವುದು ಮತ್ತೊಂದು ಕಾಲಘಟ್ಟವಾಗುತ್ತದೆ. ಆದರೆ ಕುಂಟಿನಿ ಕಾಲಾತೀತವಾಗಿ, ಜಾತ್ಯಾತೀತವಾಗಿ ತಮ್ಮ ಕಥೆಗಳನ್ನು ಹೆಣೆಯುತ್ತಾರೆ. ಆ ಕಥೆಗಳಿಗೆ ಸಹಜ ಚಲನೆಯಿಲ್ಲ. ಚದುರಿದ ಚಿತ್ರಗಳನ್ನು ಸಾಲಾಗಿ ನೋಡುವ ಮೂಲಕ ಓದುಗರೇ ಚಲನೆಯನ್ನು ಸೃಷ್ಟಿಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಇದು ಪ್ಯಾಸಿವ್ ಓದಿಗೆ ದಕ್ಕುವ ಕಥೆಗಳಲ್ಲ. ಇದು ಕುಂಟಿನಿ ಹೇಳುವ ನಾವು ಕೇಳುವ ಕತೆಗಳಲ್ಲ. ಕುಂಟಿನಿ ತಮಗನ್ನಿನಿಸದ ಹಾಗೆ ಕಥೆಯನ್ನು ಹೇಳುತ್ತಾರೆ. ಅವರು ಹೇಳುವುದು ಕಥೆಯೇ ಅಲ್ಲದಿರಬಹುದು. ನಾವು ಓದಿಕೊಳ್ಳುವಾಗ ಅದನ್ನು ನಮ್ಮ ಅನುಕೂಲದಂತೆ ಪುನರ್ನಿರ್ಮಿಸಿಕೊಳ್ಳಬೇಕು.

ವಿವರಗಳಿವೆ, ಆದರೆ ವಿವರಗಳಿಲ್ಲ. ಕಥೆಗಾರ ಇದ್ದಾನೆ, ಕಥೆಗಾರ ನಾಪತ್ತೆಯಾಗುತ್ತಾನೆ, ಮತ್ತೆ ಪ್ರತ್ಯಕ್ಷನಾಗುತ್ತಾನೆ. ವಾಕ್ಯಗಳಿವೆ, ಅವು ವಾಕ್ಯಗಳಂತೆ ಕಾಣುವುದಿಲ್ಲ. ಎಲ್ಲೆಲ್ಲೂ ಒಂದು ರೀತಿಯ ಅಪೂರ್ಣತೆಯಿದೆ. ಒಂದು ಅದ್ಭುತ ಇಮಾರತನ್ನು ಕಟ್ಟುವಾಗ ಅನೇಕ ದೃಷ್ಟಿಗೊಂಬೆಗಳನ್ನು ಕುಂಟಿನಿ ಕೂಡ್ರಿಸುತ್ತಾರೆ. ಅದರೆ ಅಲ್ಲಿ ಆ ದೃಷ್ಟಿಬೊಂಬೆಗಳನ್ನು ಸುಮ್ಮನೆ ಸ್ಥಾಪಿಸುವುದಿಲ್ಲ. ಬದಲಿಗೆ ಆ ಬೊಂಬೆಗಳಿಗೂ ಒಂದು ಕಥೆಯಿದೆ ಎನ್ನುತ್ತಾರೆ. ಒಮ್ಮೊಮ್ಮೆ ಆ ಕಥೆಯನ್ನು ಹೇಳುತ್ತಾರೆ, ಒಮ್ಮೊಮ್ಮೆ ಓದಗನಿಗೇ ಬಿಟ್ಟುಬಿಡುತ್ತಾರೆ. ಆಗಾಗ ಒಂದು ಸವಾಲನ್ನೂ ಎಸೆಯುತ್ತಾರೆ – ತಾಕತ್ತಿದ್ದರೆ ಈ ಕಥೆಯನ್ನು ನೀನೇ ಮುಂದುವರೆಸಿಕೋ – ನೀನೇ ಮುಗಿಸು ಎಂದು ಬಿಟ್ಟೇಬಿಡುತ್ತಾರೆ. ಆ ಕಥೆಯನ್ನು ಮುಗಿಸುವ ಯತ್ನ ಮಾಡುವಷ್ಟರಲ್ಲಿಯೇ ಮತ್ತೊಂದೇನೋ ಸುರುವಾಗಿರುತ್ತೆ. ಪಾತ್ರಗಳು ಬರುತ್ತವೆ, ಒಮ್ಮೊಮ್ಮೆ ಮರುಕಳಿಸುತ್ತವೆ. ಇಪ್ಪತ್ತು ಪುಟಗಳಹಿಂದೆ ಬಿಟ್ಟ ಪಾತ್ರ ಮಾತ್ರೆ ಪ್ರತ್ಯಕ್ಷವಾಗಿ ತನ್ನನ್ನು ತಾನೇ ವಿಸ್ತರಿಸಿಕೊಳ್ಳುತ್ತದೆ.... ಹೀಗಾಗಿಯೇ ಇದನ್ನು ಕಥಾ ಸಂಕಲನ ಎಂದು ಕರೆಯಲು ನನಗೆ ಅಳುಕು.

ಒಂದು ತಕರಾರು. ಈ ಶೈಲಿ ಓದುಗರೊಂದಿಗೆ ಸಂಭಾಷಣೆ ನಡೆಸಲು ಸಾಧ್ಯವಾಗುವ ಶೈಲಿಯಲ್ಲ. ಆದರೆ ಕುಂಟಿನಿಯವರು ಅದನ್ನು ಪರಿಗಣಿಸದೇ ಆಗಾಗ ಓದುಗರೊಂದಿಗೆ ಒಂದು ಒಮ್ಮುಖ ಸಂಭಾಷಣೆಯನ್ನು ನಡೆಸಲು ಪ್ರಯತ್ನಿಸುತ್ತಾರೆ. ಓದುತ್ತಿರುವ ನೀವೇ ಒಬ್ಬ ಓದುಗರೆಂದು ನೀವು ಭಾವಿಸಿ ಕಥೆಯನ್ನು ನಿಮ್ಮ ಮನಸ್ಸಿನಲ್ಲಿ ಪುನರ್ನಿರ್ಮಿಸಿಕೊಳ್ಳುತ್ತಿದ್ದರೆ, ಅತ್ತ ಕಥೆಯಲ್ಲಿಯೂ ಒಬ್ಬ ಓದುಗ ಒಂದು ಪಾತ್ರವಾಗಿ ಇದ್ದಾನೆ (ಇದ್ದಾಳೆ). ಆ ಓದುಗ(ಳಿ)ನಿಗೆ ಕಥೆಗಾರ ಆಗಾಗ ಹೋಗು ಈ ಕಥೆಯನ್ನು ನೀನೇ ಕಟ್ಟಿಕೋ ಎಂದು ಬಿಟ್ಟುಬಿಡುವುದೂ ಉಂಟು. ಒಮ್ಮೊಮ್ಮೆ ಓದುಗ(ಳೊಂ)ನೊಂದಿಗೆ ಏಕಮುಖ ಸಂಭಾಷಣೆಯೂ ಉಂಟು. ಇಲ್ಲಿ ಓದುಗ ಎಂದು ಕರೆದುಕೊಳ್ಳುವ ಒಂದು ಪಾತ್ರ ನಿಮ್ಮ ಓದಿಗೆ ಅಡ್ಡಿಮಾಡುತ್ತಾ ತಲೆಯೆತ್ತುತ್ತಿರುತ್ತದೆ. ಆದರೆ ಕಥೆಗಳ ಗಾಢತೆಯಿಂದಾಗಿ ಈ ಕಿರಿಕಿರಿಗಳನ್ನು ತಡೆದುಕೊಳ್ಳಬಹುದು.

ಪುಟ್ಟ ಪುಟ್ಟ ವಾಕ್ಯಗಳು. ಮೊದಲಿಗೆ ಪುಟ್ಟ ಪುಟ್ಟ ಕಥೆಗಳೂ ಇವೆಯಾದರೂ, ಕಡೆಯ ಕೆಲವು ಕಥೆಗಳು ಅಷ್ಟೇನು ಪುಟ್ಟದಾಗಿಲ್ಲ. ಅಂದರೆ ಅದೇ ಪಾತ್ರ, ಮತ್ತು ಘಟನೆಗಳೊಂದಿಗೆ ಕುಂಟಿನಿ ಹೆಚ್ಚು ಕಾಲ ಕಳೆಯುತ್ತಿದ್ದಾರೆಂದು ಅರ್ಥ. ಪುಟ್ಟ ವಿವರವಾದ ದೃಶ್ಯಗಳು. ಈ ಎಲ್ಲ ದೃಶ್ಯಗಳನ್ನು ನೋಡಿದಾಗ ಒಂದು ವಿಹಂಗಮ ಪ್ರಪಂಚ. ಅಲ್ಲಿ ರಾಜರೂ ಇದ್ದಾರೆ, ಶ್ರೀಸಾಮಾನ್ಯರೂ ಇದ್ದಾರೆ. ದೊಡ್ಡ ತಾತ್ವಿಕ ಸಮಸ್ಯೆಗಳಿವೆ, ಪುಟ್ಟ ದೈನಂದಿನ ಕಿರಿಕಿರಿಗಳೂ ಇವೆ. ಸಂಬಂಧಗಳ ತಳಮಳವಿದೆ, ಹಾಗೂ ಅನೇಕ ಪ್ರಶ್ನೆಗಳಿವೆ. ಇವುಗಳ ಅನುಸಂಧಾನವೇ ಓದುಗನ ಕರ್ತವ್ಯ. ಇಲ್ಲಿ ಓದುಗ ಪ್ಯಾಸಿವ್ ಆಗಿ ಇರಲು ಸಾಧ್ಯವಿಲ್ಲ. ಈ ಕಥೆಗಳನ್ನು ಒಬ್ಬರು ಮತ್ತೊಬ್ಬರಿಗೆ ಜೋರಾಗಿ ಓದಿ ಹೇಳುವುದಕ್ಕೂ ಮಾಡಿದ್ದಲ್ಲ. ಇವು ಖಾಸಗೀ ಓದಿಗೆ. ಖಾಸಗೀ ಮರು ಓದಿಗೆ. ಬೇಕಾದಲ್ಲಿ ತುಂಡರಿಸುವುದಕ್ಕೆ, ಬೇಕಾದಲ್ಲಿ ಲಂಬಿಸುವುದಕ್ಕೆ ಹಾಕಿಕೊಟ್ಟಿರುವ ಆಕರ ರೂಪವಷ್ಟೇ. ಈ ಕಥೆಗಳನ್ನು ಓದುತ್ತಾ ನಾನು ಬರಹಗಾರನಾಗಿದ್ದೇನೆ. ನನ್ನ ಅಂತರಂಗದಲ್ಲಿದ್ದ ಅನೇಕ ವಿಚಾರಗಳನ್ನು, ತತ್ವ ಸಿದ್ಧಾಂತಗಳನ್ನೂ, ದ್ವಂದ್ವಗಳನ್ನು ಈ ಕಥೆಯ ಸಂದರ್ಭದಲ್ಲಿ ಹೊರಗೆಳೆದು ತಂದು ನನ್ನದೇ ಕಥೆಗಳನ್ನು ಕಟ್ಟಿಕೊಂಡಿದ್ದೇನೆ. ಕಟ್ಟಿದ್ದನ್ನು ಮುಂದಿನ ಕಥೆ ಓದುತ್ತಾ ಛಿದ್ರ ಗೊಳಿಸಿದ್ದೇನೆ. ಕುಂಟಿನಿ ಅದಕ್ಕೆ ಒಂದು ಚೌಕಟ್ಟನ್ನೂ ಸಂದರ್ಭವನ್ನು ಒದಗಿಸಿಕೊಟ್ಟಿದ್ದಾರೆ.

ನಿಮ್ಮಲ್ಲಿನ ಕಥೆಗಾರನನ್ನು ಜಗೃತಗೊಳಿಸುವ ಈ ಶೈಲಿ, ಕಥನ ತಂತ್ರ ಹೊಸತು. ಭಿನ್ನವಾದದ್ದು. ಆದರೆ ಇದು ಈ ಪುಸ್ತಕಕ್ಕೇ ಸೀಮಿತವಾಗಲಿ. ಇದೇ ಶೈಲಿ ಮುಂದುವರೆದರೆ ಒಂದು ಏಕತಾನತೆ ಬರಬಹುದಾದ ಸಾಧ್ಯತೆಯಿದೆ. ಈ ಕಥೆಗಳು ನಮ್ಮನ್ನು ಆವರಿಸುವುದೇ ಅದರ ಹೊಸತನ ಮತ್ತು ವಿಭಿನ್ನತೆಯಿಂದಾಗಿ. ಆದರೆ ಈ ಶೈಲಿಯನ್ನು ಕುಂಟಿನಿಯವರನ್ನೊಳಗೊಂಡು ಯಾರಾದರೂ ಮುಂದುವರೆಸಿದರೆ, ಅದೇ ವಿಭಿನ್ನತೆ – ಏಕತಾನತೆಗೆ ಜಾರುವ ಅಪಾಯವಿದೆ. ಕುಂಟಿನಿಯರು ಈ ಕಥೆಗಳ ಮೂಲಕ, ಈ ಕಥನ ತಂತ್ರದ ಮೂಲಕ ಒಂದು ಅದ್ಭುತ ಜಾದೂವನ್ನು ಸೃಷ್ಟಿ ಮಾಡಿದ್ದಾರೆ. ಆದರೆ ಈ ಜಾದೂ ಮುಂದುವರೆಸಿದರೆ ಎಡವುವ ಸಾಧ್ಯತೆ ತುಂಬಾ ಇದೆ. ಹೀಗಾಗಿಯೇ, ಮುಂದೆ ಕುಂಟುನಿಯವರು ಕಥೆಗಳನ್ನು ಬರೆಯುವಾಗ ಈ ಶೈಲಿಯ ಭಂದನದಿಂದ ಮುಕ್ತರಾಗುವ ಅವಶ್ಯಕತೆ ತೀರಾ ಹೆಚ್ಚಾಗಿ ಇದೆ.
ಒಂದು ಭಾನುವಾರ ಮುಂಜಾನೆ ಬೇಗ ಏಳಿ. ಒಂದು ದೊಡ್ಡ ಕಪ್ಪಿನಲ್ಲಿ ಬಿಸಿಬಿಸಿ ಕಾಫಿ ತಯಾರಿಸಿ. ಸುತ್ತಮುತ್ತಲಿನ ಎಲ್ಲ ಶಬ್ದವನ್ನೂ ನಂದಿಸಿ. ಬಾಗಿಲು ಹಾಕಿಕೊಂಡು ಚಿಲಕ ಜಡಿಯಿರಿ. ಈ ಪುಸ್ತಕಗ ಪುಟಗಳನ್ನು ತೆರೆಯಿರಿ, ಓದಿ. ಮತ್ತೆ ಓದಿದ್ದನ್ನೇ ಓದಬೇಕೆನ್ನಿಸಿದರೆ ಮತ್ತೆ ತಿರುವಿಹಾಕಿ. ಹೊಸ ಅರ್ಥ ಸ್ಫುರಿಸಬಹುದು. ಈ ಪುಸ್ತಕವನ್ನು ಎಷ್ಟು ಹೊತ್ತು ಕೈಯಲ್ಲಿ ಹಿಡಿಯುವ ತಾಕತ್ತದೆಯೋ ಅಷ್ಟೂ ಹೊತ್ತು ಹಿಡಿದು ಕುಳಿತುಕೊಳ್ಳಿ. ನಿಮಗೆ ಓದಿನ ಒಂದು ಭಿನ್ನ ಅನುಭವ ಬರುತ್ತದೆ. ಆಗ ನೀವು ನಿಮ್ಮಲ್ಲೇ ಮಾತಾಡಿಕೊಳ್ಳುತ್ತಿರುತ್ತೀರಿ. ಕಥೆಗೆ ನಿಮ್ಮದೇ ಆಯಾಮಗಳನ್ನು ಸೇರಿಸಿಕೊಳ್ಳುತ್ತೀರಿ, ಹಾಗೂ ಅಂತ್ಯವನ್ನು ಭಿನ್ನವಾಗಿ ನೋಡುತ್ತೀರಿ, ಅಥವಾ ಮತ್ತೆ ಬೇರೊಂದೇ ರೀತಿಯಲ್ಲಿ ನಿಮ್ಮ ಕಥೆಗಳನ್ನು ಕಟ್ಟಿಕೊಳ್ಳುತ್ತೀರಿ.
ಕುಂಟಿನಿಯವರು ತಮ್ಮ ಕಥೆಗಳನ್ನು ಹೇಳುತ್ತಿಲ್ಲ. ನಿಮಗೆ ನಿಮ್ಮ ಕಥೆಯನ್ನು ನಿರ್ಮಿಸಿಕೊಳ್ಳಲು ಒಂದು ವೇದಿಕೆಯನ್ನೊದಗಿಸಿಕೊಡುತ್ತೀದ್ದಾರೆ ಅಷ್ಟೇ.

ತಾಜಾತನದಿಂದ ಕೂಡಿರುವ ಈ ಘನವಾದ ಕಥೆಗಳನ್ನು ನಾನು ತುಂಬುಹೃದಯದಿಂದ ಕಥಾಲೋಕಕ್ಕೆ ಸ್ವಾಗತಿಸುತ್ತಿದ್ದೇನೆ. ಕುಂಟಿನಿಯವರ ಈ ವಿಶಾಲ ಮನಸ್ಸನ್ನೂ ಸ್ವಾಗತಿಸುತ್ತಿದ್ದೇನೆ.



   

   

No comments:

Post a Comment