Sunday, July 5, 2015

ಕನಸುಗಾರನ ಏಳು ಬೀಳು: ಮುನ್ನುಡಿ


ಈ ಪುಸ್ತಕಕ್ಕೆ ಮುನ್ನುಡಿ ಬರೆಯುವ ಸಮಯಕ್ಕೆ ತಮ್ಮ ಅಸ್ತಿತ್ವವನ್ನು ನಿರ್ದೇಶಿಸಿದ ಯುಬಿ ಸ್ಪಿರಿಟ್ಸ್ ಕಂಪನಿಯ ನಿರ್ವಹಣಾ ಮಂಡಲಿಯಿಂದ ವಿಜಯ್ ಮಲ್ಯರನ್ನು ಹೊರಹಾಕಬೇಕೆಂಬ ಕೋರಿಕೆ ಬಂದಿದೆ. ಅದು ಸಫಲವಾದರೆ ಈ ಪುಸ್ತಕದ ಶೀರ್ಷಿಕೆ ಸೂಚಿಸುವಂತೆ ಸೊಗಸುಗಾರನ ಏಳೂ, ಬೀಳೂ ಎರಡೂ ಒಂದು ರೀತಿಯಲ್ಲಿ ಸಂಪೂರ್ಣಗೊಂಡಂತಾಗುತ್ತದೆ. ಆದರೂ ವಿಜಯ್ ಮಲ್ಯರನ್ನು ನಾವು ಯಾವುದೇ ರೀತಿಯಲ್ಲಿ ಕಡೆಗಣಿಸುವಂತಿಲ್ಲ. ಅವರು ಯಾವ ರೂಪದಲ್ಲಿ ಹೇಗೆ ವ್ಯಾಪಾರಕ್ಕೆ ವಾಪಸ್ಸಾಗುತ್ತಾರೋ ತಿಳಿಯದಾದರೂ ಈಗ್ಯೆ ಒಂದು ಮಹತ್ವದ ಅಧ್ಯಾಯ ಮುಗಿದಂತೆ ಎಂದೇ ಪರಿಗಣಿಸಬಹುದು. ಇಲ್ಲಿಯವರೆಗೂ ಮಲ್ಯರು ಅನೇಕ ವ್ಯಾಪಾರಗಳನ್ನು ನಿರ್ವಹಿಸಿದ್ದಾರೆ, ಕೆಲವು ವ್ಯಾಪಾರಗಳಲ್ಲಿ ಯಶಸ್ಸೂ ದೊರೆತಿದೆ, ಕೆಲವು ವ್ಯಾಪಾರಗಳಿಂದ ಅವರು ಯಶಸ್ವಿಯಾಗಿ ಹೊರಬಿದ್ದಿದ್ದಾರೆ. ಆದರೆ ಹಿಂದೆಂದೂ ಅವರ ಮೂಲ ವ್ಯಾಪಾರವಾದ ಮದ್ಯದ ಧಂಧೆಯಲ್ಲಿ ಅವರು ಸೋಲನುಭವಿಸಿರಲಿಲ್ಲ. ಅವರ ಯಾವುದೇ ವ್ಯಾಪಾರವೂ ಹಣದ ರಾಶಿಯನ್ನು ಪೂರೈಸುತ್ತಿದ್ದ ಮದ್ಯದ ವ್ಯಾಪಾರವನ್ನು ಸ್ವಾಹಾ ಮಾಡುವಷ್ಟು ಕೆಟ್ಟದಾಗಿಯೂ ಬೇರೆ ವ್ಯಾಪಾರಗಳನ್ನು ಅವರು ನಿರ್ವಹಿಸಿಲಿಲ್ಲ. ಆದರೆ ಈಗ ಮಲ್ಯರಿಗೆ ಅವನತಿಯ ಕಾಲ ಬಂದಂತಿದೆ.

ದೊಡ್ಡ ಉದ್ದಿಮೆದಾರರ ಖಾಸಗೀ ಬದುಕಿನ ಬಗ್ಗೆ ಒಂದು ಕುತೂಹಲವಿದ್ದೇ ಇರುತ್ತದೆ. ಅದರಲ್ಲೂ ಶ್ರೀಮಂತರ ಯಾದಿಗೆ ಸೇರಿದವರು ತಮ್ಮ ಶ್ರೀಮಂತಿಕೆಯನ್ನು ಹೇಗೆ ಬಳಸುತ್ತಾರೆಂಬ ಬಗ್ಗೆ ಕಥೆಗಳೂ ಊಹಾಪೋಹಗಳೂ ಇರುವುದು ಸಹಜವೇ. ನಾರಾಯಣ ಮೂರ್ತಿ, ಅಜೀಂ ಪ್ರೇಂಜಿಗಳು ಸರಳ ಬದುಕಿಗೆ ಹೆಸರಾದವರು. ಅಂಬಾನಿ ಅದಾನಿಯರಿಗೆ ಖಾಸಗೀ ಬದುಕೆಂಬುದೇ ಇಲ್ಲವೆಂಬಂತೆ ಅವರು ಎಚ್ಚರವಿರುವ ಅಷ್ಟೂ ತಾಸು ವ್ಯಾಪಾರದಲ್ಲಿಯೇ ಮುಳುಗಿರುತ್ತಾರೆ. ಕೆಲವರಿಗೆ ತಮ್ಮ ಖಾಸಗೀ ಆಸಕ್ತಿಗಳಿರುತ್ತವೆ. ವಿಜಯಪತ್ ಸಿಂಘಾನಿಯಾಗೆ ಒಂಟಿಯಾಗಿ ವಿಮಾನ ಹಾರಿಸುವ ಹುಚ್ಚು - ರಿಚರ್ಡ್ ಬ್ರಾನ್ಸನ್ ಗೆ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ. ಆಧ್ಯಾತ್ಮ, ಗಾಲ್ಫ್, ಸಂಗೀತ, ನಾಟಕ, ಸಿನೇಮಾ, ಹೀಗೆ ವ್ಯಾಪಾರದಲ್ಲಿರುವ ಶ್ರೀಮಂತರ ಆಸಕ್ತಿಗಳೂ ವಿಭಿನ್ನ. ಈ ಹೊರಗಿನ ಆಸಕ್ತಿಗಳು ವ್ಯಾಪಾರಕ್ಕೆ ಧಕ್ಕೆ ತರದಂತೆ ನೋಡಿಕೊಳ್ಳವ ಜಾಗ್ರತೆಯನ್ನು ಸಾಮಾನ್ಯವಾಗಿ ವ್ಯಾಪಾರಿಗಳು ಕೈಗೊಳ್ಳುತ್ತಾರೆ. ಆದರೆ ತಮ್ಮ ಖಾಸಗೀ ಬದುಕಿನ ಶೈಲಿಯನ್ನು ವ್ಯಾಪಾರಕ್ಕೆ ಅಳವಡಿಸಿದಾಗ ಏನು ತೊಂದರೆಯಾಗಬಹುದು ಎನ್ನುವುದೇ ವಿಜಯ ಮಲ್ಯರ ಬದುಕಿನ ಪಾಠ ಎನ್ನಿಸುತ್ತದೆ. ಹೀಗಾಗಿಯೇ ಅವರು ತಮ್ಮ ವಿಮಾನಯಾನ ಸಂಸ್ಥೆಯನ್ನು ಒಬ್ಬ ಗ್ರಾಹಕನ ದೃಷ್ಟಿಯಿಂದ ನೋಡಿದರೇ ವಿನಃ ಅದರ ಲಾಭನಷ್ಟಗಳೇನೆಂದು ನಿಷ್ಠುರವಾಗಿ ನೋಡುವ ವ್ಯಾಪಾರಿ ದೃಷ್ಟಿಯಿಂದ ನೋಡಲಿಲ್ಲವೇನೋ. ಅದರಿಂದಾಗಿ, ತಮ್ಮ ಐಷಾರಾಮವನ್ನು ವ್ಯಾಪಾರದಲ್ಲಿ ಅಳವಡಿಸಲು ಹೋಗಿ ಮಲ್ಯರು ಸೋತಿರಬಹುದು.

ನಾನು ವಿದ್ಯಾರ್ಥಿಯಾಗಿದ್ದಾಗ ನಮ್ಮ ಸಂಸ್ಥೆಗೆ ಮಲ್ಯರನ್ನು ಕರೆಯಿಸಲಾಗಿತ್ತು. ಅವರು ವೃತ್ತಿಪರ ಯುವಕರು ಪಾಲಿಸಬೇಕಾದ ಮೌಲ್ಯಗಳು  ಎನ್ನುವ ವಿಷಯದ ಬಗ್ಗೆ ಮಾತನಾಡಬೇಕಿತ್ತು. ಮಲ್ಯರು ತಮ್ಮ ಬೆಂಜ್ ಕಾರಲ್ಲಿ ಬಂದರು. ತಮ್ಮ ವಿಶಿಷ್ಯ ಶೋಕಿಯ ಶೈಲಿಯಲ್ಲಿ ಹಸಿರು ಬಣ್ಣದ ಟೈ, ಬೂದು ಬಣ್ಣದ ಸೂಟು ಧರಿಸಿದ್ದರು. ಕೋಟಿನ ಒಳಜೇಬಿನಿಂದ ತಾವು ಬರೆದು ತಂದಿದ್ದ ಭಾಷಣವನ್ನು ನಿರರ್ಗಳವಾಗಿ ಓದಿದರು. ವಿದ್ಯಾರ್ಥಿಗಳು ಪಾಲಿಸಬೇಕಾದ ಮೌಲ್ಯಗಳ ಬಗ್ಗೆ ಹೇಳಿದರು. ಅವರು ಆಗಷ್ಟೇ ಬರ್ಜರ್ ಜೆನ್ಸನ್ ನಿಕಲ್ಸನ್ ಕಂಪನಿಯನ್ನು ಖರೀದಿಸಿದ್ದರು. ಕೊಂಡುಕೊಳ್ಳಲಿರುವ ಕಂಪನಿಯ ಆಸ್ತಿಯನ್ನೇ ಅಡ ಇಟ್ಟು ಅದರ ಮೇಲೆ ಸಾಲಪಡೆದು ಸ್ವಾಮ್ಯ ಪಡೆಯಬಹುದಾದ ಲಿವರೇಜ್ಢ್ ಬೈ ಔಟ್ ಎನ್ನುವ ಕ್ಲಿಷ್ಟ ಪದ್ದತಿಯ ಬಗ್ಗೆ ನಮಗೆ ಸರಳವಾಗಿ ವಿವರಿಸಿದರು. ಕಡೆಗೂ ಮಾತು ಮುಗಿದು ಪ್ರಶ್ನೋತ್ತರದ ವೇಳೆಯಲ್ಲಿ ಮಲ್ಯರು ಆಗ್ಗೆ ಕಣ್ಣು ಹಾಕಿದ್ದರೆನ್ನಲಾದ ಐಡಿಯಲ್ ಜಾವಾ ಕಂಪನಿಯ ಬಗ್ಗೆ ಪ್ರಶ್ನೆ ಉದ್ಭವವಾಯಿತು. ಅದಕ್ಕೆ ಆತ ನಾನು ನನ್ನ ವೃತ್ತಿಯನ್ನು ಪ್ರಾರಂಭಿಸಿದಾಗ ನಮ್ಮಪ್ಪ ನನ್ನನ್ನು ಮಾರಾಟದ ಕೆಲಸಕ್ಕೆ ಹಾಕಿದ್ದರು. ಓಡಾಡಲು ಗಾಡಿ ಬೇಕೆಂದು ನಾನು ಕೇಳಿದ್ದಕ್ಕೆ ಒಂದು ಜಾವಾ ಬೈಕ್ ಕೊಡಿಸಿದ್ದರು. ಆ ಬೈಕ್ ಬಗ್ಗೆ ನನಗೆ ತುಂಬಾ ಪ್ರೀತಿಯಿತ್ತು. ಈಗ ಆ ಕಂಪನಿ ತೊಂದರೆಯಲ್ಲಿದೆ ಎಂದು ತಿಳಿದು ಬಂದಿದೆ. ಹಳೆಯ ನೆನಪಿಗೊಸ್ಕರ ಅದನ್ನು ಖರೀದಿಸಲೂ ಬಹುದು ಎಂದು ಉತ್ತರಿಸಿದ್ದರು. ಅವರು ಆ ಉತ್ತರವನ್ನು ಲಘುವಾಗಿ ನೀಡಿದ್ದರಾದರೂ, ಅವರ ವ್ಯಾಪಾರದ ವೈಖರಿ ಹಾಗೇ ಇತ್ತೆಂದು ಈ ಪುಸ್ತಕ ಓದಿದಾಗ ನಮಗೆ ಮನವರಿಕೆಯಾಗುತ್ತದೆ. ಒಬ್ಬ ವಿದ್ಯಾರ್ಥಿ ಮಲ್ಯರ ಕಾರುಗಳು, ಕುದರೆಗಳು ಮತ್ತು ಬೈಕಿನ ಪ್ರೀತಿಯ ಬಗ್ಗೆ ಮಾತಾಡಲಿಲ್ಲವಲ್ಲ ಎಂದು ಕೇಳಿದ. ಅದಕ್ಕೆ ಯುವ ವಿದ್ಯಾರ್ಥಿಗಳು ಪಾಲಿಸಬೇಕಾದ ಮೌಲ್ಯಗಳು ಅವು ಅಲ್ಲವಾದ್ದರಿಂದ ಆ ಬಗ್ಗೆ ಮಾತಾಡಲಿಲ್ಲ. ನಾನು ಭಾಷಣವನ್ನು ತಯಾರು ಮಾಡಿ ತಂದದ್ದೂ ಅದೇ ಕಾರಣವಾಗಿ. ನೀವು ಪಾಲಿಸಬೇಕಾದ ಮೌಲ್ಯಗಳ ಬಗ್ಗೆ ನಾನು ಯೋಚಿಸಬೇಕಾಯಿತು, ಅವು ನಾನು ಪಾಲಿಸವ ಮೌಲ್ಯಗಳಲ್ಲ..ಎಂದೂ ಒಂದು ಚಟಾಕಿ ಹಾರಿಸಿದ್ದರು.

ಮಲ್ಯರು ವಿವರಿಸುತ್ತಿದ್ದ ಲಿವರೇಜ್ಡ್ ಬೈ ಔಟ್ ಪದ್ಧತಿಯೇ, ಅವರ ಜೀವನಶೈಲಿಯಲ್ಲಿಯೂ ಇತ್ತು. ಹೀಗಾಗಿಯೇ ಇಂದಿನ ಐಷಾರಾಮವು ಕಾಣಿಸುತ್ತು ಹಾಗೂ ನಾಳಿನ ಬಗೆಗಿನ ಚಿಂತೆಯು ಕಾಣುತ್ತಿರಲಿಲ್ಲ. ಮದ್ಯದ ವ್ಯಾಪಾರದಲ್ಲಿ ಬರುತ್ತಿದ್ದ ಅತೀ ಹೆಚ್ಚಿನ ಲಾಭದಿಂದಾಗಿ ಅವರ ಇತರ ವ್ಯಾಪಾರದಲ್ಲಿನ ಗೆಲುವು ಸೋಲುಗಳ ಪರಾಮರ್ಶೆಯೂ ಸಮರ್ಪಕವಾಗಿ ನಡೆಯಲಿಲ್ಲ. ಕಡೆಗೂ ಅವರು ಮಣ್ಣುಮುಕ್ಕಲು ಒಂದು ವಿಮಾನಯಾನ ಸಂಸ್ಥೆಯೇ ಬೇಕಾಯಿತು. ಅತೀ ಕಡಿಮೆ ಲಾಭಾಂಶವಿರುವ, ದುಡ್ಡನ್ನು ನೀರಿನಂತೆ ನುಂಗುವ ವ್ಯಾಪಾರವಾದ ವಿಮಾನಯಾನದ ವ್ಯಾಪಾರದಲ್ಲಿ ಕೈ ಸುಟ್ಟುಕೊಂಡದ್ದು ಮತ್ತದರ ಫಲವಾಗಿ ತಮ್ಮ ಮದ್ಯದ ವ್ಯಾಪಾರವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಮುಟ್ಟಿದ್ದು ಈಗ ಸರ್ವವಿದಿತ.

ಕಿಂಗ್-ಫಿಶರ್ ಏರ್ಲೈನ್ಸ್ ಒಂದು ರೀತಿಯಲ್ಲಿ ಮಲ್ಯರ ಜೀವನವನ್ನು ಫಾಸ್ಟ್ ಫಾರ್ವಡ್ ಮಾಡಿ ನೋಡಿದಂತಿತ್ತು. ಅತ್ಯಂತ ಯಶಸ್ವೀ ಸಂಸ್ಥೆಯಾಗಿ, ಅತ್ಯಂತ ಐಷಾರಾಮಿ ಪದ್ಧತಿಗಳನ್ನು ಅನುಸರಿಸುತ್ತಿದ್ದ ಸಂಸ್ಥೆಯಾಗಿ, ಇದ್ದ ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ನಿದ್ದೆಗೆಡಿಸಿ, ಪ್ರಯಾಣಿಕರಿಗೆ ಪ್ರೀತಿಯ-ಐಷಾರಾಮದ ವಿಮಾನಯಾನ ಒದಗಿಸುವ ಸಂಸ್ಥೆ ಏನೂ ಇಲ್ಲವಾಗಿ ನಾಶನವಾಗಿಹೋಯಿತು. ಗ್ರಾಹಕರನ್ನು ಮಹಾರಾಜರಂತೆ ನೋಡಿಕೊಳ್ಳುವ, ಆದರೆ ಅವರಿಂದ ಅದಕ್ಕೆ ತಕ್ಕ ಬೆಲೆಯನ್ನು ಪಡೆಯಲಾರದ, ವಿಪರೀತ ಹೆಚ್ಚಿನ ಸಿಬ್ಬಂದಿ ಹೊಂದಿದ್ದ ಈ ಸಂಸ್ಥೆ ಭೂಮಿಗಿಳಿಯದೇ ಆಕಾಶದಲ್ಲೇ ತೇಲಾಡುತ್ತಿತ್ತು. ಆದರೆ ಆ ಸಂಸ್ಥೆ ಕುಸಿದಾಗ ಮಲ್ಯ ಕಟ್ಟಿದ್ದ ಸಾಮ್ರಾಜ್ಯವನ್ನು ಮುಳುಗಿಸಿಯೇ ಹೋಯಿತು.


ಇಂಥ ಜೀವನ ಶೈಲಿಯ – ವ್ಯಾಪಾರಿಯ ಕಥೆಯನ್ನು ಕೆ ಗಿರಿಪ್ರಕಾಶ್ ಅವರು ಪುಸ್ತಕರೂಪಕ್ಕೆ ಇಳಿಸಿದ್ದಾರೆ. ಈ ಪುಸ್ತಕದ ಒಂದೊಂದು ಅಧ್ಯಾಯದಲ್ಲೂ ಮಲ್ಯರ ಒಂದೊಂದು ವ್ಯಾಪಾರದ ಏಳು ಬೀಳಿನ ಬಗ್ಗೆ ಅವರು ಚರ್ಚಿಸಿದ್ದಾರೆ. ಮಲ್ಯರ ವ್ಯಕ್ತಿತ್ವ, ಚಾಣಾಕ್ಷತನ, ವ್ಯಾಪಾರೀ ಧೋರಣೆ, ಐಷಾರಾಮ, ಎಲ್ಲ ವಿವರಗಳನ್ನೂ ಗಿರಿಪ್ರಕಾಶ್ ಅಧ್ಯಯನ ಮಾಡಿ ಸುಲಭವಾಗಿ ದಕ್ಕುವಂತೆ ಓದುಗರಿಗೆ ಉಣಬಡಿಸಿದ್ದಾರೆ. ಮಲ್ಯರ ಜೀವನದಲ್ಲಿ ಅನೇಕ ರೋಚಕ ಘಟನೆಗಳು ನಡೆದಿದ್ದರೂ ಗಿರಿಪ್ರಕಾಶ್ ರೋಚಕತೆಗೆ ಮಣಿದಿಲ್ಲ. ಲಕ್ಷ್ಮೀ ಮಿತ್ತಲ್ ಬಗ್ಗೆ ಬಂದಿರುವ ಕೋಲ್ಡ್ ಸ್ಟೀಲ್, ಸುಬ್ರತೋ ರಾಯ್ ಬಗ್ಗೆ ಬಂದಿರುವ ಸಹಾರಾ – ದ ಅನ್ ಟೋಲ್ಡ್ ಸ್ಟೋರಿಯಂತಹ ಪುಸ್ತಕಗಳಿಗೆ ಹೋಲಿಸಿದರೆ ಈ ಪುಸ್ತಕ ಡ್ರಾಮಾದಿಂದ ಮುಕ್ತವಾಗಿದೆ. ಆ ಎರಡೂ ಪುಸ್ತಕಗಳು, ಹಾಗೂ ಈ ರೀತಿಯ ವ್ಯಾಪಾರಿಗಳ ಜೀವನಶೈಲಿಯ ಬಗೆಗೆ ಬಂದಿರುವ ಅನೇಕ ಪುಸ್ತಕಗಳ ನಿರೂಪಣೆಯಲ್ಲಿ ಒಂದು ಪತ್ತೇದಾರಿ ಕಾದಂಬಿರಿಯ ಶೈಲಿಯನ್ನು ಅನುಸರಿಸುವ ಗೋಜಿಗೆ ಗಿರಿಪ್ರಕಾಶ್ ಹೋಗಿಲ್ಲ. ಆದರೂ ಆ ಶೈಲಿ ಕೆಲ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಮಲ್ಯರ ಬಾಲ್ಯ, ಅವರ ತಂದೆಯೊಂದಿಗಿನ ಸಂಬಂಧ, ಅವರ ಧೋರಣೆಯನ್ನು ಗ್ರಹಿಸುತ್ತ ಪ್ರಾರಂಭವಾಗುವ ಪುಸ್ತಕ, ಒಂದು ಜೀವನ ಚರಿತ್ರೆಯಂತೆ ಓದಿಸಿಕೊಳ್ಳಬಹುದಿತ್ತು. ಆದರೆ ಇದು ಬಿಡಿಬಿಡಿ ಕಥೆಗಳ ಕಥಾಸಂಕಲನವಿದ್ದಂತಿದೆ. ಇದಕ್ಕೆ ಗಿರಿಪ್ರಕಾಶ್ ಅನುಸರಿಸಿರುವ ಶೈಲಿಯೇ ಕಾರಣವಾಗಿದೆ. ಪ್ರತಿ ಅಧ್ಯಾಯದಲ್ಲಿ ಮಲ್ಯರ ಒಂದು ವ್ಯಾಪಾರದ ಬಗ್ಗೆ ಗಿರಿಪ್ರಕಾಶ್ ಚರ್ಚಿಸುತ್ತಾರೆ. ಆದರೆ ಆ ವ್ಯಾಪಾರಕ್ಕೂ, ಮಲ್ಯರ ಇತರ ವ್ಯಾಪಾರಗಳಿಗೂ, ಮಲ್ಯರ ಒಟ್ಟಾರೆ ವ್ಯಾಪಾರಿ ದೃಷ್ಟಿಗೂ ಕೊಂಡಿಗಳನ್ನು ಅವರು ಹಾಕಲು ಪ್ರಯತ್ನಸುವುದಿಲ್ಲ. ಹೀಗಾಗಿ  ನಮಗೆ ಮಲ್ಯರ ಒಟ್ಟಾರೆ ವ್ಯಾಪಾರಿ ಸಾಮ್ರಾಜ್ಯದ ಬಗ್ಗೆ ಒಂದು ವಿಹಂಗಮ ನೋಟ ಸಿಗುವುದಿಲ್ಲ. ಆ ಕೊಂಡಿಗಳು ಇದ್ದಿದ್ದರೆ ಪುಸ್ತಕ ಇನ್ನೂ ಸರಳವಾಗಿ ಓದಿಸಿಕೊಂಡು ಹೋಗುವುದಲ್ಲದೇ ಹೆಚ್ಚು ಉಪಯುಕ್ತವಾಗೂ ಇರುತ್ತಿತ್ತು.

ಈ ಪುಸ್ತಕವನ್ನು ಗೆಳೆಯರಾದ ಬಿಎಸ್ ಜಯಪ್ರಕಾಶ ನಾರಾಯಣ ಕನ್ನಡಕ್ಕೆ ತಂದಿದ್ದಾರೆ. ಅನುವಾದಕರಾಗಿ ಅವರು ಕನ್ನಡೀಕರಿಸುತ್ತಿರುವ ಭಿನ್ನ ಪುಸ್ತಕಗಳು ನಮಗೆ ಮುಖ್ಯವೂ ಅವಶ್ಯಕವೂ ಆಗಿವೆ. ಬೇರೆಬೇರೆ ಮೂಲಗಳಿಂದ ಬರಬಹುದಾದ ಅನುಭವಗಳನ್ನು ನಮ್ಮ ಭಾಷೆಯಲ್ಲಿಯೇ ಸರಳವಾಗಿ ಓದಲು ಸಾಧ್ಯವಾದರೆ ನಮಗೆ ಓದಿನ ಆಯ್ಕೆಯೂ ಹೆಚ್ಚುತ್ತದೆ, ವಿಷಯ ವೈವಿಧ್ಯವೂ ದೊರೆಯುತ್ತದೆ. ವಿಜಯ್ ಮಲ್ಯ ಒಂದು ರೀತಿಯಿಂದ ಬೆಂಗಳೂರಿಗರು, ಕನ್ನಡಿಗರು ಎನ್ನುವ ಕಾರಣಕ್ಕಾಗಿ ಈ ಪುಸ್ತಕದ ಮಹತ್ವ ತುಸು ಹೆಚ್ಚಾಗುತ್ತಾದರೂ, ಒಬ್ಬ ವ್ಯಾಪಾರಿಯ ಜೀವನ, ಮನೋಧರ್ಮ, ವ್ಯಾಪಾರೀ ಯೋಜನೆಗಳನ್ನು ಅರಿಯಲು ಈ ಪುಸ್ತಕ ಅನುವು ಮಾಡಿಕೊಟ್ಟದೆ. ಜೆಪಿ ಭಿನ್ನ ಭಾಷೆಯನ್ನೇ ಉಪಯೋಗಿಸುವ ವ್ಯಾಪಾರೀ ಜಗತ್ತನ್ನು ತಮ್ಮ ಸರಳ ಮತ್ತು ಆಪ್ಯಾಯಮಾನವಾದ ಶೈಲಿಯಲ್ಲಿ ಕನ್ನಡೀಕರಿಸಿದ್ದಾರೆ.


ವಿಜಯ್ ಮಲ್ಯರು ತಮ್ಮ ಬದುಕಿನ ಶೈಲಿಯಿಂದಾಗಿ ತುಸು ಹೆಚ್ಚೇ ಸುದ್ದಿಯಲ್ಲಿರುತ್ತಾರೆ. ಹೀಗಾಗಿ ಅವರ ಬಗ್ಗೆ ಬರೆಯುವಾಗ ಅದನ್ನು ಒಂದು ಗಾಸಿಪ್ ಕಾಲಂನಂತೆ, ಪೇಜ್ 3 ವರದಿಯಂತೆ ಬರೆಯುವ ಅಪಾಯವಿದ್ದೇ ಇದೆ. ಆದರೆ ಆ ದಿಕ್ಕಿಗೆ ಹೋಗದೇ, ಅವರ ವ್ಯಪಾರದ ಬಗ್ಗೆ ವಸ್ತುನಿಷ್ಠವಾಗಿ ಬರೆದಿರುವ ಗಿರಿಪ್ರಕಾಶ್ ಅವರನ್ನೂ, ಸಮರ್ಥವಾಗಿ ಅನುವಾದಿಸಿರುವ ಜೆಪಿ ಅವರನ್ನು ಅಭಿನಂದಿಸುತ್ತೇನೆ. ಕನ್ನಡ ಭಾಷೆಯಲ್ಲಿನ ಓದಿನ ವೈವಿಧ್ಯಕ್ಕೆ ಈ ಪುಸ್ತಕದ ಕೊಡುಗೆ ಮುಖ್ಯವಾದದ್ದು ಮತ್ತು ಮಹತ್ವದ್ದು ಎಂದು ಭಾವಿಸಿದ್ದೇನೆ.Tuesday, December 17, 2013

ರಶೀದ್: ಕವಿತೆಗಳು ನೆಪಮಾತ್ರ

ಅಬ್ದುಲ್ ರಶೀದ್ ಎಂದರೆ ನಮಗೆಲ್ಲಾ ಏನೇನೋ. ಶ್ರೀನಿವಾಸರಾಜು ಮೇಷ್ಟ್ರು ತಮ್ಮ ಮೌನದ ನಡವೆ ಹೆಮ್ಮೆಯಿಂದ ಎತ್ತುತ್ತಿದ್ದ ಹೆಸರು, ಕಿ.ರಂ.ಗೆ ಪುಳಕವುಂಟುಮಾಡುವಂತಹ ಕವಿತೆಗಳನ್ನೂ, ಬರವಣಿಗೆಯನ್ನೂ ಬರೆಯುತ್ತಿದ್ದ ಹೆಸರು, ಭಾಷೆಯನ್ನು ತನ್ನ ಸುಪರ್ದಿನಲ್ಲಿಟ್ಟು ಪದಜೋಡಣೆಯಿಂದಲೇ ಒಂದು ಅದ್ಭತ ದೃಶ್ಯವನ್ನು ನಮ್ಮ ಮುಂದಿಡಬಹುದಾದ ಒಂದು ಪ್ರತಿಭೆ. ಅಷ್ಟೇ ಅಲ್ಲ – ರಶೀದ್ ಎಂದರೆ ಜನರ ಬಗೆಗಿನ ನಿರಂತರ ಕುತೂಹಲ: ಅದು ಅವರ ಪಯಣಗಳ ಕಾಲುಚಕ್ರ. ಹಳ್ಳಿರೇಡಿಯೋ ಮೂಲಕ ಕಂಡ ಬುಡಕಟ್ಟು ಜನಾಂಗದವರ ಜೀವನಚಿತ್ರ. ಲಡಾಕಿನಲ್ಲಿ, ಶೀಲಾಂಗಿನಲ್ಲಿ, ಮೇಘಾಲಯದಲ್ಲಿ ಸಿರಿಯಾದಲ್ಲಿ ಕಂಡುಬಂದ ಜನ. ಕೆಲವು ಕವಿತೆಯ ರೂಪದಲ್ಲಿ, ಕೆಲವು ಅಂಕಣರೂಪದಲ್ಲಿ, ಮತ್ತು ಕೆಲವು ಕೇವಲ ಅವರ ಕ್ಯಾಮರಾದಿಂದ ಬಂದ ದೃಶ್ಯಗಳು.

ಆಕಾಶವಾಣಿಯಂತಹ ಶ್ರಾವ್ಯ ಮಾಧ್ಯಮಗಲ್ಲಿ ಈವರೆಗೆ ದುಡಿಯುತ್ತಿದ್ದರೂ, ಅಲ್ಲಿಯ ಶ್ರವಣದ ಮೂಲಕವೇ ನಮಗೆ ದೃಶ್ಯವನ್ನು ಒದಗಿಸಿದ ಒಬ್ಬ ಮಹಾ ಪ್ರತಿಭಾವಂತ. ನಾವು ರಶೀದರ ಸೃಜನಶೀಲ ಪಯಣದಲ್ಲಿ ಅವರ ಗ್ರಾಹಕರು. ಗ್ರಾಹಕ ಅನ್ನುವ ಪದವನ್ನು ಕನ್ಸ್ಯೂಮರ್ ಅನ್ನುವ ಪರಿಮಿತಿಯಿಂತ ನೋಡದೇ, ವಿಸ್ತಾರವಾದ ಅರ್ಥದಲ್ಲಿ ಸಾಹಿತ್ಯ-ಬರವಣಿಗೆಯ ಅಕ್ಷರಗುಚ್ಛ-ಛಾಯಾಚಿತ್ರಗಳು-ಕಿವಿಯ ಮೇಲೆ ಬಿದ್ದ ಆಕಾಶವಾಣಿಯ ತರಂಗಗಳು-ಪದಗಳ ಜೋಡಣೆಯ ಅರ್ಥವಿನ್ಯಾಸವಲ್ಲದೇ ಅದರ ಸುತ್ತಿರುವ ದೃಶ್ಯವಿನ್ಯಾಸ ಇವುಗಳನ್ನೆಲ್ಲಾ ಗ್ರಹಿಸುವವರೆಂದು ನಾವು ಅರ್ಥೈಸಿದಾಗ ಗ್ರಾಹಕನಿಗೊಂದು ವಿಸ್ತಾರವಾದ ಕ್ಯಾನ್ವಾಸ್ ಸಿಗುತ್ತದೆ. ರಶೀದರು ತಮ್ಮ ಗ್ರಾಹಕರ ಒಂದು ಇಂದ್ರಿಯವನ್ನಾಕ್ರಮಿಸುತ್ತಾರೆಂದರೆ ಅದು ನೋಟಕ್ಕೆ ಸಂಬಂಧಿಸಿದ್ದು. ಯಾವುದನ್ನೂ ಕಣ್ಣಿಗೆ ಕಟ್ಟುವುದು ಅವರ ಸೃಜನಶೀಲ ಪಯಣದ ಮುಖ್ಯ ವ್ಯಸನವಾಗಿದೆ ಎಂದು ನನಗನ್ನಿಸುತ್ತದೆ. ಹೀಗಾಗಿಯೇ ರಶೀದರು ಬಳಸುವ ಪದಪುಂಜದಲ್ಲಿ ಗ್ರಾಹಕ ಪದಕ್ಕಿರುವ ಕನ್ಸ್ಯೂಮರ್ ಅನ್ನುವದಕ್ಕಿಂದ ಹಿರಿದಾದ ಅರ್ಥವಿಸ್ತರಣೆ ನಮಗೆ ಕಾಣಿಸುತ್ತಾ, ಅದು ಎಳೆಎಳೆಯಾಗಿ ಬಿಡಿಸಿಕೊಳ್ಳುತ್ತಾ ಬೆರಗುಗೊಳಿಸುತ್ತಾ ಹೋಗುತ್ತದೆ.

ಉದಾಹರಣೆಗೆ ಕೆಂಡಸಂಪಿಗೆಯನ್ನೇ ತೆಗೊಳ್ಳೋಣ. ಕನ್ನಡ ಜಾಲತಾಣಕ್ಕೆ ಒಂದು ಹೊಸ ಎಸ್ತಟಿಕ್ಸನ್ನ ಆ ಪ್ರಯೋಗ
ಒದಗಿಸಿಕೊಟ್ಟಿತ್ತು. ಹೊಸ ಎಸ್ತಟಿಕ್ಸ್ ನಮಗೆ ಜಾಲತಾಣ ಕಾಣುವ ರೀತಿಯಲ್ಲಿ, ಆದರಲ್ಲಿ ಬರುತ್ತಿದ್ದ ಭಿನ್ನ ರೀತಿಯ ಬರವಣಿಗೆಗಳಲ್ಲಿ, ಅದು ಪರಿಚಯಿಸಿದ ಹೊಸ ಪ್ರತಿಭೆಗಳಲ್ಲಿ, ಇದ್ದ ಸಿದ್ಧ ಬರಹಗಾರರ ಮೂಲಕ ಕಾಣಿಸಿದ ಹೊಸ ಬರವಣಿಗೆಗಳಲ್ಲಿ. ಆದರೆ ರಶೀದರ ಸೃಜನಶೀಲತೆಯ ಹಿಂದೆ ಒಂದು ತುಂಟ ಮನಸ್ಸೂ ಇದೆ. ಆ ತುಂಟತನವೇ ಅವರ ಬರವಣಿಗೆಯ ಗಾಂಭೀರ್ಯವನ್ನೂ ವಿಸ್ತರಿಸುತ್ತದೆ. ಆ ತುಂಟ ಮನಸ್ಸು ಎರಡು ರೀತಿಯಲ್ಲಿ ಕೆಲಸ ಮಾಡುತ್ತದೆ.

ಖಾಸಗಿಯಾಗಿ ಅವರ ತುಂಟತನ ಗೆಳೆಯರಾದ ನಮಗೆ ಕಾಣಿಸುತ್ತಿತ್ತಾದರೂ ಸಾರ್ವಜನಿಕವಾಗಿ ಆ ತುಂಟತನ ಕಂಡದ್ದು ಕೆಂಡಸಂಪಿಗೆಯ ಎಟಿಕೆಟ್ಟಿನಲ್ಲಿ. ಕೆಂಡಸಂಪಿಗೆಯ ಹೂರಣ, ಓರಣಕ್ಕೆ ಗಾಂಭೀರ್ಯವನ್ನೂ ಎಸ್ತಟಿಕ್ಸನ್ನೂ ತಂದ ರಶೀದ್ ಆ ಗಾಂಭೀರ್ಯವನ್ನು ಕೆಳಗೆ ಎಗ್ಗಿಲ್ಲದೇ ಬರುತ್ತಿದ್ದ ಜನರ ಪ್ರತಿಕ್ರಿಯೆಗಳಿಗೆ ಕತ್ತರಿ ಹಾಕದೇ ದೊಡ್ಡ ದೊಡ್ಡ ಲೇಖಕರ ಗರ್ವಭಂಗ ಮಾಡಿದರು. ಅಲ್ಲಿ ಅವರ ಎಸ್ತಟಿಕ್ಸು ಗೆರೆಯ ಮೇಲಕ್ಕೆ ಸೀಮಿತವಾಗಿತ್ತು. ಲೇಖನ ಮುಗಿದ ಗೆರೆಯಡಿಯಲ್ಲಿ ನಮಗೆ ಕಂಡದ್ದು ನಿರರ್ಗಳ-ನಿರ್ಭಿಡೆ. ಆಗಾಗ ಪ್ರತಿಕ್ರಿಯೆಗಳನ್ನು ತಡೆಹಿಡಿವ ಪ್ರಯೋಗವನ್ನು ಮಾಡಿದರೂ ಅವರೊಳಗಿನ ತುಂಟ ಹೀಗೆ ಉದ್ದೀಪನಗೊಳ್ಳುತ್ತಲೇ ಇದ್ದ.

ರಶೀದರ ತುಂಟತನ ಸೃಜನಶೀಲರೂಪ ಪಡೆದದ್ದೇ ಭಿನ್ನರೀತಿಯಲ್ಲಿ. ಅವರ ಈ ತನಕದ ಕವಿತೆಗಳ ಪುಸ್ತಕ – ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿಯನ್ನು ಅವರು ಅರ್ಪಿಸಿರುವುದು ನಕ್ಷತ್ರ ಮತ್ತು ಇತರ ದುಷ್ಟದೇವತೆಗಳಿಗೆಅದೇ ನಕ್ಷತ್ರಳೇ ಇವರಿಗೆ ಬೆನ್ನುಡಿಯನ್ನೂ ಬರೆದಿದ್ದಾಳೆ. ಆದರೆ ನಕ್ಷತ್ರ ಯಾರು ಎನ್ನುವ ಕುತೂಹಲವನ್ನು ರಶೀದ್ ಉಳಿಸಿಕೊಳ್ಳುವುದಲ್ಲದೇ ಬೆಳೆಸುತ್ತಲೂ ಹೋಗುತ್ತಾರೆ. ತಮ್ಮ ಪ್ರಸ್ತಾವನೆಯ ಮಾತುಗಳಲ್ಲಿಯೂ ನಕ್ಷತ್ರಳ ಹೆಸರು ಬರುತ್ತದೆ. ಜೊತೆಗೆ ತಾನೇ ನಕ್ಷತ್ರಳಲ್ಲ ಎನ್ನುವ ವಾದವನ್ನೂ ರಶೀದ್ ಮಾಡುತ್ತಾರೆ. ಅದರ ಸತ್ಯಾಸತ್ಯತೆ ಕಂಡುಕೊಳ್ಳಬೇಕಾದ್ದು ನಮ್ಮ ಕೆಲಸವಲ್ಲ. ಅದರ ಅವಶ್ಯಕತೆಯೂ ಇಲ್ಲ. ಯಾಕೆಂದರೆ ಲಂಕೇಶ್ ಪತ್ರಿಕೆಯಲ್ಲಿ ಮಿಂಚುತ್ತಿದ್ದ ನೀಲು, ನಿಮ್ಮಿಗಳ್ಯಾರೆಂದು ಕಾಲಾನುಕ್ರಮೇಣ ನಮಗೆ ತಿಳಿದು ಬಂತು. ಹಾಗೆಯೇ ಒಂದಿಲ್ಲೊಂದು ದಿನ ನಕ್ಷತ್ರಳ (ಅಥವಾ ನಕ್ಷತ್ರನ) ಗುಟ್ಟೂ ರಟ್ಟಾಗಬಹುದು. ರಟ್ಟಾಗದಿದ್ದರೂ ಪರವಾಗಿಲ್ಲ. ಆದರೆ ನಕ್ಷತ್ರಳ ನೆಪದಲ್ಲಿ  ಅವರ ಸೃಜನಶೀಲ ತುಂಟತನದ ಚರ್ಚೆಯನ್ನು ಮಾಡುವುದು ಅವಶ್ಯಕ. ಅದನ್ನು ಭಟ್ಟರಲ್ಲಿಗೆ ತಂದಿಡೋಣ.

ರಶೀದರ ಕವಿತೆಗಳ ಪುಸ್ತಕ ಬಿಡುಗಡೆಯ ಸಮಯಕ್ಕೆ ಮಾತನಾಡಿದ ನಾನು ಅವರ ಮೂಲ ಹಸ್ತಪ್ರತಿಯಿಂದ ನನಗೆ ತುಂಬಾ ಹಿಡಿಸಿದ ಒಂದು ಕವಿತೆಯನ್ನು ಹೆಕ್ಕಿದ್ದೆ. ಅದರ ಹೆಸರು ಚೆಲುವೆ ಹೆಂಡತಿಗೆ ಬರೆದ ಕವಿತೆಆದರೆ ಛಾಪಾಗಿದ್ದ ಪುಸ್ತಕವನ್ನು ನಾನು ಕೈಯಲ್ಲಿ ಹಿಡಿದಾಗ ನನಗೆ  ಚೆಲುವೆ ಹೆಂಡತಿಯ ಮಂದೆ ಭಟ್ಟರುಬಂದು ನಿಂತದ್ದು ಕಾಣಿಸಿತು. ಆ ಬಗ್ಗೆ ನಾನು ಪ್ರಸ್ತಾಪಿಸಿ, ಇದ್ದಕ್ಕಿದ್ದಹಾಗೆ ರಶೀದರೇ ಬರೆದಿದ್ದ ಚೆಲುವೆ ಹಂಡತಿಯನ್ನು ಭಟ್ಟರ ಪಾಲಾಗಿಸಿದ್ದು ಏಕೆನ್ನುವ ಅನುಮಾನವನ್ನು ಸಹಜವಾಗಿ ಸಭೆಯ ಮುಂದಿಟ್ಟೆ. ಅದಕ್ಕೆ ರಶೀದರ ಸಮಜಾಯಿಷಿಯಲ್ಲಿಯೇ ಅವರ ತಂಟತನ ಕಂಡುಬಂತು. ಇದು ತಾನು ಕೆಂಡಸಂಪಿಗೆಯಲ್ಲಿ ಮಹಾಲಿಂಗೇಶ್ವರ ಭಟ್ ಎಂಬ ಹೆಸರಿನಲ್ಲಿ ಬರೆದ ಕವಿತೆಯಾದ್ದರಿಂದ ಭಟ್ಟರ ಹೆಸರನ್ನು ಕವಿತೆಯ ಮೊದಲಿಗೇ ಜೊಡಿಸಿದ್ದೆಂದು ಅಬ್ದುಲ್ ರಶೀದ್ ಭಟ್ ಹೇಳಿದರು! ಆ ಕವಿತೆಯನ್ನು ಇನ್ನೊಮ್ಮೆ ಆಸ್ವಾದಿಸೋಣ:

ಚೆಲುವೆ ಹೆಂಡತಿಗೆ ಒಂದು ಕವಿತೆ
ನಿನ್ನ ನೆನೆದೊಡೆ ಎನಗೆಂಥ ಮಂದಹಾಸ.
ಎಂಥ ಕಣ್ಣೀರು, ನಾಟಕದಂತಹ ರೊಚ್ಚೆ ಅಳು!


ಈಗಷ್ಟೆ ಅಡಿಕೆಯ ಪಾತಿಗೆ ನೀರೆರೆದು,
ಆಳು ಮಕ್ಕಳಿಗಿಷ್ಟು ಅಶ್ಲೀಲವಾಗಿ ಜರೆದು,
ಅಳುವ ಮಗುವ ತುಟಿಗೊಂದಿಷ್ಟು ಮೊಲೆಯ ತೊಟ್ಟನು
ತುರುಕಿ ಅದಕೂ ಬೈದು, ಉಣ್ಣಿ ಕಚ್ಚಿದ ಮೊಣಗಂಟನ್ನು 
ತುರಿಸುತ್ತಾ ಬಂದವಳೆ. ‘ಕಂಡೆಯಾ ಎನ್ನ ಹೆಂಗಸ್ತನ’ ಅಂದವಳೆ!
ನಿನ್ನ ನೆನೆದೊಡೆ ಎನಗೆಂಥ ಮಂದಹಾಸ.

ಆಹಾ ಎಷ್ಟು ನಯ, ವಿನಯ, ಕೊಂಕು, 
ಶೇಲೆ, ಹಣೆಯ ಕುಂಕುಮ, ಕರಿಮಣಿ,
ಕಾಲ ಉಂಗುರ ಈಗ ತಾನೇ ಹಸೆಯಿಂದೆದ್ದು 
ಬಂದ ನಾಚುಗೆ, ಕೊರಳಲ್ಲಿ ಬೆವರ ಸಾಲೆ
ನಿನ್ನ ಕೊಂಡಾಟವ ಇಂದು ಮುಂಜಾವ ಕಂಡಿಲ್ಲವೇನೇ
ಬೆಳಕು ಹರಿವಷ್ಟೂ ಹೊತ್ತು ಜರೆದು, ಉಗುರಿಂದ ಸಿಗಿದು,
ಇದು ಆ ಕ್ಷತವೆಂದು ಇದು ಈ ಕ್ಷತವೆಂದು
ಎದೆಯಲ್ಲಿ ನೂರು ಅರೆ ಚಂದ್ರಗಳ ಎಳೆದು
ಮೇಲೆ ಬಂದು ಮಥಿಸಿ ಕೊಟ್ಟಿಗೆಗೆ ಸಗಣಿ ಬಾಚಲು ಹೋದವಳು
ನೀನಲ್ಲವೇನೇ. ನಿನ್ನ ನೆನೆದೊಡೆ ಎನಗೆಂಥ ಮಂದಹಾಸ.

-ಮಹಾಲಿಂಗೇಶ್ವರ ಭಟ್

ಹೀಗಾಗಿಯೇ ಈ ಮಹಾಲಿಂಗೇಶ್ವರ ಭಟ್ ಅವರ ಹಿನ್ನೆಲೆಯಲ್ಲಿ ನಾವು ನಕ್ಷತ್ರಳನ್ನು ಅನುಮಾನದಿಂದ ನೋಡಬೇಕಾಗುತ್ತದೆ. ರಶೀದರ ನಡುವಯಸ್ಕ ಹೃದಯಕ್ಕೆ ನಾನಾ ರೀತಿಯಲ್ಲಿ ಘಾತವುಂಟುಮಾಡಿ ಅದರಿಂದಲೇ ಕವಿತೆಯನ್ನು ಹೊರಡಿಸುವ – ಈಬದಿಯಂದಾಬದಿಗೆ ಆಬದಿಯಿಂದೀಬದಿಗೆ ಕವಿತೆಗಳನ್ನು ಬರೆಯಿಸುವ ಜುಗಲ್ ಬಂದಿಯನ್ನು ಸ್ವಾಗತಿಸುತ್ತಲೇ ನಮ್ಮ ಅನುಮಾನವನ್ನು ಹಿಂದಕ್ಕಟ್ಟಬೇಕಾಗುತ್ತದೆ. ಅದು ಅಂತಿರಲಿ – ಈ ಮಹಾಲಿಂಗೇಶ್ವರ ಭಟ್ ಕವಿತೆಯಲ್ಲಿರುವ ಎರಡು ಭಾಗಗಳಲ್ಲಿನ ವೈರುಧ್ಯತೆಯನ್ನು ನೋಡಿ. ಮೊದಲನೆಯದ್ದು ದೈನಿಕವನ್ನೇ ಕವಿತೆಯನ್ನಾಗಿಸಿರುವ ಪರಿ. ಅಲ್ಲಿ ಹೆಂಡತಿ ಆಳು ಮಕ್ಕಳಿಗಿಷ್ಟು ಅಶ್ಲೀಲವಾಗಿ ಜರೆದು ಅಳುವ ಮಗುವಿನ ತುಟಿಗೊಂದಿಷ್ಟು ಮೊಲೆಯ ತೊಟ್ಟನು ತುರುಕುತ್ತಾಳೆ. ಅ ವಾಸ್ತವವನ್ನು ಶಿಷ್ಟವಾಗಿ ಕವಿತೆಯಲ್ಲಿ ಬಣ್ಣಿಸುವ ಪರಿ ಎರಡನೆಯ ಭಾಗದಲ್ಲಿ ನಮಗೆ ಕಾಣಿಸುತ್ತದೆ. ಇದನ್ನು ಓದಿದಾಗ ತಿರುಮಲೇಶರ ಒಂದು ಪದ್ಯದ ಸಾಲುಗಳು ಸಹಜವಾಗಿಯೇ ನೆನಪಾಗುತ್ತದೆ. ಪರಕಾಯ ಪ್ರವೇಶ ಎಂಬ ಕವಿತೆಯ ಸಾಲುಗಳು ಹೀಗಿವೆ:

...... ಅಶ್ವಿನಿಗೆ ಮಾತ್ರ
 ಕುಂಡೆಯಲ್ಲೊಂದು ಕುರುವಾದ್ದರಿಂದ
ಒಂದು ಥರ ಲಾಸ್ಯದಲ್ಲಿ ನಡೆಯುತ್ತಾಳೆ
ಒಂದು ಥರ ಆಲಸ್ಯದಲ್ಲಿ ಕುಳಿತುಕೊಳ್ಳತ್ತಾಳೆ
ಪ್ರೇಕ್ಷಕರು ದಂಗಾಗಿದ್ದಾರೆ! ಇಂಥ ಮಾದಕ
ಭಂಗಿಯನ್ನು ಅವರು ಇದುತನಕ
ನೋಡಿಯೇ ಇಲ್ಲ!.......

ರಶೀದ್ ಕವಿಯಾಗಿ, ಲೇಖಕನಾಗಿ ಬೆಳೆಯುವುದಿಲ್ಲ. ಇಂಥ ದೈತ್ಯ ಪ್ರತಿಭೆಯುಳ್ಳ ಯುವಕರು ಎಂದೂ ಮುದಿಯಾಗುವುದಿಲ್ಲ. ಜಯಂತ ಕಾಯ್ಕಿಣಿಯಾಗಲೀ ಅಬ್ದುಲ್ ರಶೀದ್ ಆಗಲೀ ತಮ್ಮ ಸಹಜ ಪ್ರತಿಭೆಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಾರೆ. ಹೀಗಾಗಿಯೇ ಮೊದಲ ಸಂಕಲನದಲ್ಲಿರುವ ಕವಿತೆಯ ಬೆರಗು ಇತ್ತೀಚಿನ ಕವಿತೆಯಲ್ಲೂ ಕಾಣಬಹುದು. ನಡುವಯಸ್ಸಿನಲ್ಲಿ ಬರೆದ ಕವಿತೆಯ ಗಾಂಭೀರ್ಯ ಮತ್ತು ಪ್ರಬುದ್ಧತೆ ಟೀನೇಜ್ ಕವಿತೆಗಳಲ್ಲೂ ಕಾಣಿಸುತ್ತದೆ. ಅಂದರೆ ಬಹುಬೇಗನೆ ಜೀವನದ ಕಾಣ್ಕೆಯ ಪ್ರಬುದ್ಧತೆ ಇದ್ದಾಗ್ಯೂ ಅದಮ್ಯ ಕುತೂಹಲ ಮತ್ತು ಜೀವನಪ್ರೀತಿ ಈ ಲೇಖಕರನ್ನು ಸದಾ ತಾಜಾತನದಲ್ಲಿಟ್ಟಿರುತ್ತವೆ.

ಇದಕ್ಕೆ ಉದಾಹರಣೆಯಾಗಿ ಎರಡು ಪದ್ಯಗಳ ಕೆಲವು ಸಾಲುಗಳನ್ನು ಕೊಡುತ್ತೇನೆ. ಮೊದಲನೆಯದು ತಮ್ಮ ಮೊದಲ ಕವಿತೆಯಾದ ನನ್ನ ಪಾಡಿಗೆ ನಾನು ಕವಿತೆಯದ್ದು:
ನನ್ನ ಪಾಡಿಗೆ ನಾನು ನನ್ನ ಪಾಡಿಗೆ ಹೋಗಿ
ನನ್ನ ಉಮ್ಮನ ಮುಂದೆ ಅತ್ತುಬಿಡುವೆ
ಅತ್ತು ಅತ್ತೂ ಅವಳ ಅಲಿಕತ್ತ ತೂತಕ್ಕೆ
ಕೈಯಿಕ್ಕಿ ಎಳೆದೆಳೆದು ನಕ್ಕು ಬರುವೆ.


ಈ ಕೆಳಗಿರುವ ಸಾಲುಗಳು ಶ್ರೀನಿವಾಸರಾಜು ಮೇಷ್ಟರಿಗೆ ನಮಸ್ಕಾರ ಕವಿತೆಯದ್ದು:
ಸುಮ್ಮನೆ ಮೇಷ್ಟರ ಕಾಲಬಳಿ ಕುಳಿತು ಅಥವಾ ಅವರ ಕೈತುತ್ತಿನಂತಹ
ವಾತ್ಸಲ್ಯ ಉಂಡು ಯಾಕೆ ಬೆನ್ನುತಡವಿಸಿಕೊಂಡು ಬರಲಾಗುತ್ತಿಲ್ಲ

ಈ ಎರಡೂ ಕವಿತೆಯ ಸಾಲುಗಳ ನಡುವೆ ಅನೇಕ ವರ್ಷಗಳ ಸಮಯ ಕಳೆದಿದೆ. ಆದರೆ ಆ ಸಾಲುಗಳನ್ನು ಬರೆದಿರುವ ಹುಡುಗನ ಮುಗ್ಧತೆ ಮುಂದುವರೆದಿದೆ. ಅವರ ಮೊದಲ ಸಂಕಲನಕ್ಕೆ ಮುನ್ನುಡಿ ಬರೆದ ಕಿ.ರಂ 1992ರಲ್ಲಿ ಬರೆದದ್ದು ಈ ಸಾಲುಗಳು:

ಈ ಸಂಕಲನದ ಕವಿತೆಗಳಲ್ಲಿ ಮೇಲಿಂದ ಮೇಲೆ ಮುಗ್ಧ ಹುಡುಗನೊಬ್ಬ ಕಾಣಿಸುತ್ತಾನೆ. ಆ ಹುಡುಗ ಇಲ್ಲಿನ ಕವಿತೆಗಳ ಕೇಂದ್ರ. ಅವನು ಒಳಗೊಳ್ಳುವ ಅನೇಕ ಸಂಬಂಧಗಳು ಈ ಕವಿತೆಗಳ ಮುಖ್ಯ ಆವರಣ. ಈ ಆವರಣದಲ್ಲಿ ಹುಡುಗ ಅತ್ಯಂತ ಸಾಚಾ ಆದ ತನ್ನ ಆಲೋಚನೆಗಳಿಗೆ, ಅನುಭವಗಳಿಗೆ ಎದುರಾಗುತ್ತಾನೆ. ಮುಗ್ಧತೆ ಅನುಭವಗಳನ್ನು, ಅದರ ಸೂಕ್ಷ್ಮತೆಗಳನ್ನು ಗಾಢವಾಗಿ ಒಳಗೊಳ್ಳಲು ತಕ್ಕ ಒಂದು ಅವಸ್ಥೆ ಎಂಬುದು ಆ ಹುಡುಗನ ಮೂಲಕ ತಿಳಿಯುತ್ತದೆ. ಮುಗ್ಧ ಅನುಭವ ಒಂದು ತಾತ್ವಿಕವಾದ ಸೆಲೆಯನ್ನು ಕಟ್ಟಿಕೊಡುವಷ್ಟು ಸೂಕ್ಷ್ಮತೆಯನ್ನು ಪಡೆದುಕೊಂಡಿರುವುದು ಇಲ್ಲಿನ ವಿಶಿಷ್ಟತೆ.

ಆ ಮಾತುಗಳು ಇಂದಿಗೂ ವರ್ತಿಸುತ್ತವೆ. ಹುಡುಗ ಹುಡುಗಿಗೆ ನಿವೇದಿಸಿಕೊಳ್ಳುತ್ತಿರುವಂತೆಯೇ ಬೆಳೆದು ಬಂದಿರುವ ರಶೀದರ ಕಾವ್ಯಮಾರ್ಗದಲ್ಲಿ ಆ ಮುಗ್ಧತೆಯೂ ಇದೆ, ಬೆರಗೂ ಇದೆ, ಅದು ಕಾಣಿಸುವ ಪ್ರಬುದ್ಧತೆಯೂ ಇದೆ. ಹೀಗಾಗಿಯೇ ಆತ ಮೋಹಿತನಾಗಿಯೇ ಉಳಿದು ಹಾಗೆಯೇ ಬೆಳೆದುಬಿಡುತ್ತಾನೆ.
ಅವರ ಈ ತನಕದ ಕವಿತೆಗಳಲ್ಲಿ ಇದುವರೆಗೆ ಬರೆದ ಎಲ್ಲ ಕವಿತೆಗಳೂ ಇಲ್ಲಿಲ್ಲ….. ಕೆಲವನ್ನು ನಾನೇ ನುಂಗಿ ನೀರು ಕುಡಿದಿರುವೆಎನ್ನುತ್ತಾರೆ. ಮೊದಲ ಸಂಕಲನದಲ್ಲಿ ಇರುವ, ಅವರೀಗ ನುಂಗಿರುವ ಒಂದು ಕವಿತೆಯನ್ನು ಇಲ್ಲಿ ಉಲ್ಲೇಖಿಸುತ್ತೇನೆ. ಇದನ್ನು ಯಾಕೆ ನುಂಗಿದರೆಂದು ನನಗಿನ್ನೂ ಅರ್ಥವಾಗುತ್ತಿಲ್ಲ.

ಮಳೆ

ಇಂದು ಎನಗೆ ಇಂಥ ಸುಖವು ಬಂತೆ ಎಲ್ಲಿಂದ!
ಪರಮಾತ್ಮನಿಂದ, ಮಣ್ಣಿನಿಂದ ಮಳೆ ಹಾತೆ ನಿನ್ನಿಂದ
ಹಾತೆ ಬಂದರೂ ಮಳೆಯ ಸುಳಿವೇ ಇಲ್ಲ ಯಾಕಣ್ಣಾ?
ತಂಗಿ ಎನಗೆ ಇಂಥ ಸುಖವು ಬಂತೆ ಎಲ್ಲಿಂದ?

ತಂಗಿ, ತಂಗಿ, ನಿನ್ನ ಮೋಹಕೆ ಮಳೆಯು ಸುರಿದಿಲ್ಲ
ಅಲ್ಲಿ ಬಂದಂಥ ಮಳೆಯು ಇಲ್ಲಿ ಬಂದಿಲ್ಲ
ಅವಳು ಬಂದಳು ಅವಳೂರಿನಿಂದ ಮಳೆಯ ಊರಿಂದ ತಂಗಿ
ಮಳೆಯ ಹನಿಗಳು ಸೋಕುತಿಹವು ಮುಡಿಯ ಮೇಲಿಂದ.

ಮುಡಿಯೆ ಮುಡಿಯೆ ಮುಗಿಲು ಮಿಂಚೇ
ಗುಡುಗು ಮೇಲಿಂದ, ಬಿದಿರುಮಳೆಗೆ ಸಿಡಿಲು
ಮಿಂಚೆ ಅವಳ ಊರಿಂದ ತಂಗಿ,
ಬಿದಿರು ಹೂವು ಚುಕ್ಕೆ ಹಾಗೆ ಎತ್ತಿ ಮುಡಿಯಿಂದ
ಮಳೆಯ ಹಾಗೆ ಮುಡಿಯ ಅಲುಗಿಸು
ಎದೆಯ ಮೇಲೆಲ್ಲಾ.

ಅಣ್ಣ ಅಣ್ಣ ಹಾತೆ ಬಂದರೂ ಮಳೆಯ ಸುಳಿವಿಲ್ಲ
ತಂಗಿ ತಂಗಿ ಅವಳು ಬಂದಳು ಮಳೆಯ ಊರಿಂದ
ಇಲ್ಲಿ ಬಂದಂಥ ಮಳೆಯು ಎಲ್ಲು ಬಂದಿಲ್ಲ
ಬಿದಿರು ಮಳೆಯ ಹೂವು ಮಳೆಯು ಒದ್ದೆ ಮೈಯೆಲ್ಲಾ
ಹನಿಯು ಹನಿಯು ಒದ್ದೆ ಹುಡುಗಿ ಸುರಿವನಗೆಯೆಲ್ಲಾ

ಹೀಗೆ ಮಳೆಯನ್ನೇ ನುಂಗಿದ ನೀರುಕುಡಿದ ರಶೀದರ ವಿರಳ ಕವಿತೆಗಳು ನಮಗೆ ಪುಸ್ತಕರೂಪದಲ್ಲಿ ಈಗ ಸಿಗುತ್ತಿದೆ. ರಶೀದರ ತುಂಟತನವಲ್ಲದ, ತುಂಟತನವಿಲ್ಲದ ಈ ಬರವಣಿಗೆಯನ್ನು ನಾವು ಸಂಭ್ರಮಿಸಬೇಕು. ಅಷ್ಟೇ. ಆ ಅಪ್ಪಟ ಸಂಭ್ರಮಕ್ಕೆ ಆಹ್ವಾನಪತ್ರಿಕೆ ಈ ಲೇಖನ.

Saturday, August 11, 2012

2012ರಲ್ಲಿ ಪ್ರಸ್ತುತವಾಗಿರುವ ಶ್ರೀಕಾಂತರ ಕಥೆಗಳು

ಈ 2012ನೇ ಸಂವತ್ಸರದಲ್ಲಿ ಶ್ರೀಕಾಂತರ ಇಡಿಯ ಸಾಹಿತ್ಯವನ್ನು ಓದಿ, ಅದನ್ನು ಅರ್ಥೈಸಿ ಅದಕ್ಕೊಂದು ಚಾರಿತ್ರಿಕ ಮಹತ್ವವನ್ನೂ, ಸಂದರ್ಭವನ್ನೂ ಸೃಷ್ಟಿಸುವುದು ಸುಲಭವಾದ ಕೆಲಸವಲ್ಲ. ನಾನು ಈ ಹಿಂದೆ ಶ್ರೀಕಾಂತರ ಕಥೆಗಳನ್ನು ಓದಿಯೇ ಇರಲಿಲ್ಲ. ಈ ಮಾತು ಆಧುನಿಕ ಸಾಹಿತ್ಯದ ಚರಿತ್ರೆಯಲ್ಲಿ ಇರಬಹುದಾದ ಒಂದು ಕಂದರವನ್ನು ಪ್ರಾತಿನಿಧಿಕವಾಗಿ ಸೂಚಿಸುತ್ತದೆ. ನವ್ಯರ ಕಾಲದಲ್ಲಿ ಬಂದ ಮುಖ್ಯ ಲೇಖಕರಾದ ಆದರೆ ವಿರಳವಾಗಿ ಬರೆದ ರಾಜಲಕ್ಷ್ಮೀ ರಾವ್, ಕಾಮರೂಪಿ, ಗಿರಿ, ಖಾಸನೀಸ, ಕಥೆಗಾರ ಗಿರಡ್ಡಿ, ಕನ್ನಡದಲ್ಲಿ ಸೀಮಿತವಾಗಿ ಬರೆದ ರಾಮಾನುಜನ್ ಇಂಥ ದಿಗ್ಗಜರ ಯಾದಿಗೆ ಶ್ರೀಕಾಂತರೂ ಸೇರುತ್ತಾರೆ. ವಿರಳವಾಗಿ ಬರೆದದ್ದರಿಂದಲೇ ಒಂದು ರೀತಿಯ ಮರವೆಗೆ ಬಲಿಯಾಗುವುದೂ ಸಹಜ. ವಿಪುಲವಾಗಿ ಬರೆಯುವವರ ಹೊಸ ಕೃತಿಯ ಜೊತೆಜೊತೆಗೇ ಅವರುಗಳ ಹಳೆಯ ಕೃತಿಗಳ ಮರುಮೌಲ್ಯಮಾಪನವಾಗುತ್ತದೆ. ಹೀಗಾಗಿ ಅದು ಸಾಮೂಹಿಕ ನೆನಪಿಗೆ ಒಡ್ಡಿಕೊಳ್ಳುತ್ತದೆ. ಕನ್ನಡದಲ್ಲಿ ವಿರಳವಾಗಿ ಬರೆದೂ ಸಾಮೂಹಿಕ ಪ್ರಜ್ಞೆಯಲ್ಲಿ ಜೀವಂತವಾಗಿರುವವರು ದೇವನೂರ ಮಹಾದೇವ ಮಾತ್ರವೇನೋ. ಇಂಗ್ಲೀಷಿನಲ್ಲಿ ತಕ್ಷಣಕ್ಕೆ ನೆನಪಾಗುವ ಹೆಸರು ಟು ಕಿಲ್ ಎ ಮಾಕಿಂಗ್ ಬರ್ಡ್ ಬರೆದ ಹಾರ್ಪರ್ ಲೀ.

ಶ್ರೀಕಾಂತರ ಕಥನ ತಂತ್ರವನ್ನು ಇಂಥ ಚಾರಿತ್ರಿಕ ಸಂದರ್ಭದಲ್ಲಿ ನಾವು ಪರೀಕ್ಷಿಸಬೇಕಾಗಿದೆ. ಅವರ ಸಾಹಿತ್ಯವನ್ನು ಅವಲೋಕಿಸುವಾಗ ನನಗೆ ತಟ್ಟೆಂದು ಹೊಳೆಯುವುದು ಕನ್ನಡ ಸಾಹಿತ್ಯಕ್ಕೆ ವಿಶೇಷವಾದ ಆದರೆ ಅನವಶ್ಯಕವಾದ ಲೇಖಕನ ಜಾತಿ, ರಾಜಕೀಯ ಒಲವುಗಳ ಆಧಾರದ ಓರೆಗಲ್ಲಿನ ಮೇಲೆ ಸಾಹಿತ್ಯದ ಕೃಷಿಯನ್ನು ಉಜ್ಜಿ ನೋಡುವ ಪರಂಪರೆ. ಬ್ರಾಹ್ಮಣವಾದಿ-ದಲಿತ, ಎಡಪಂಥೀಯ-ಬಲಪಂಥೀಯ, ಈ ರೀತಿಯ ದೃಷ್ಟಕೋನದಿಂದ ಮಾಡುವ ಮೌಲ್ಯಮಾಪನದಿಂದಾಗಿ ಕೃತಿಗಳಿಗಿರಬಹುದಾದ ಮೂಲ ಸೃಜನಶೀಲ ಗುಣಗಳನ್ನು ಗುರುತಿಸುವುದರಲ್ಲಿ ನಾವು ವಿಫಲರಾಗುತ್ತೇವೆಯೇ ಎಂದು ನನಗೆ ಆಗಾಗ ಅನ್ನಿಸುತ್ತದೆ.

ಶ್ರೀಕಾಂತರ ಸಾಹಿತ್ಯವನ್ನು ಹೀಗೆ ಅರ್ಥೈಸಿದರೆ ಅವರು ತಮ್ಮ ಮೂಲ ವಿಚಾರಧಾರೆಗೆ ವಿರುದ್ಧವಾಗಿ ಬರೆಯುತ್ತಿದ್ದಾರೆ ಅನ್ನಿಸುತ್ತದೆ. ಅವರ ಪ್ರಾಸ್ತಾವಿಕ ಮಾತುಗಳಲ್ಲಿ, ವ್ಯಾಸರಾವ್ ಬರೆದಿರುವ ಟಿಪ್ಪಣಿಗಳಲ್ಲಿ ತಿಳಿಯುವುದೇನೆಂದರೆ – ಆತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೂ, ಆ ವಿಚಾರಧಾರೆಯನ್ನು ಒಪ್ಪಿ ನಡೆದವರೂ ಎನ್ನುವ ವಿವರ. ಆದರೆ ಅವರ ಸೃಜನಶೀಲತೆಯಲ್ಲಿ ಆ ವಿಚಾರಧಾರೆಯ ಸಲೆ ಕಾಣುವುದಿಲ್ಲ. ನಿರಂಜನರ ಕಥೆಗಳನ್ನು ಓದಿದಾಗ ಅವರ ರಾಜಕೀಯದ ಒಲವು ನಮಗೆ ತಕ್ಷಣಕ್ಕೆ ತಿಳಿಯುತ್ತದಾದರೂ, ಶ್ರೀಕಾಂತರ ಕಥೆಗಳನ್ನು ಓದಿದಾಗ ಹಾಗನ್ನಿಸುವುದಿಲ್ಲ.

ಶ್ರೀಕಾಂತರು ಬರೆದ ಸಮಯದ ಚೌಕಟ್ಟಿನಲ್ಲಿ ಅವರ ಕಥೆಗಳನ್ನು ಓದಿದಾಗ ಕೆಲವು ವಿಚಾರಗಳು ನಮ್ಮನ್ನು ತಟ್ಟುತ್ತವೆ. ಅವರ ಸಾಹಿತ್ಯ ಗ್ರಾಮದ ಚೌಕಟ್ಟಿನಲ್ಲಿ ಮೂಡುವುದಿಲ್ಲ. ಜಾತಿ ಪದ್ಧತಿಯಲ್ಲಿ ಉದ್ಭವವಾಗುವುದಿಲ್ಲ. ಶೋಷಣೆಯ ಮಾತಾಗಲೀ, ಮಣ್ಣಿನ ಮಾತಾಗಲೀ ಕಾಣುವುದಿಲ್ಲ, ಒಂದು ಭೌಗೋಳಿಕ ಸಂದರ್ಭಕ್ಕೂ ಅವು ಸೇರುವುದಿಲ್ಲ. ಅನಂತಮೂರ್ತಿಯವರ ಸಂಸ್ಕಾರ, ದೇವನೂರರ ಕುಸುಮಬಾಲೆ, ಮಾಸ್ತಿ, ಲಂಕೇಶರ ಕಥೆಗಳಿಗೆ ಒಂದು ಭೌಗೋಳಿಕ, ಚಾರಿತ್ರಿಕ, ಸಾಂಸ್ಕೃತಿಕ, ಸಾಮಾಜಿಕ ಸಂದರ್ಭವಿತ್ತು. ಆದರೆ ಶ್ರೀಕಾಂತರ ಕಥೆಗಳಿಗೆ ಒಂದು ಸಾರ್ವತ್ರಿಕ ಗುಣವಿದೆ. ಆ ಸಾರ್ವತ್ರಿಕ ಗುಣವನ್ನು ನಾವು ಗುರುತಿಸಬೇಕಾದರೆ ಆ ಕಥೆಗಳನ್ನು ಹಿಂದಿ, ಮರಾಠಿ, ತೆಲುಗು, ತಮಿಳು, ಉರ್ದುವಿನ ಸಂದರ್ಭದಲ್ಲಿ ಊಹಿಸಿ ನೋಡಬೇಕು. ಆಗಲೂ ಅವರ ಕಥೆಗಳು ಪಾಸಾಗುತ್ತವೆ. ಅಂದರೆ ಅದನ್ನು ಗ್ರಾಮ್ಯ-ನಗರ, ಬ್ರಾಹ್ಮಣ-ದಲಿತ, ಆಧುನಿಕ-ಮಡಿವಂತ ಎಂದು ವರ್ಗೀಕರಿಸುವುದಕ್ಕೆ ಸಾಧ್ಯವಿಲ್ಲ. ಒಂದೇ ಕಾಲಕ್ಕೆ ಈ ಕಥೆಗಳು ನವ್ಯದಂತೆಯೂ, ಪ್ರಗತಿಶೀಲದಂತೆಯೂ ಕಾಣಿಸುತ್ತವೆ. ಹೀಗಾಗಿ ಶ್ರೀಕಾಂತರನ್ನು ಒಬ್ಬ ತೆರೆದ ಮನಸ್ಸಿನ ಆಧುನಿಕ ಕಥೆಗಾರ ಎಂದು ಮಾತ್ರ ಕರೆಯಲು ಸಾಧ್ಯ. ಅವರ ಕಥೆಗಳು ಎಲ್ಲೇ ನಡೆದರೂ ಅವಕ್ಕೆ ನಗರೀಕರಣದ, ಅನಾಮಿಕತ್ವದಿಂದ ಬರಬಹುದಾದ ವಿಶಾಲಮನಸ್ಸಿನ ಆಧುನಿಕ ಲೇಪವಿರುವುದನ್ನು ಕಾಣಬಹುದು.

ಶ್ರೀಕಾಂತರ ಕಥೆಗಳಲ್ಲಿ ಎರಡು ಮುಖ್ಯ ಧಾರೆಗಳಿವೆ. ಒಂದು: ಹೆಣ್ಣಿನ ಬಗೆಗಿನ ಅತ್ಯಂತ ಕೂತಹಲ – ಅದರಿಂದ ಬೆಳೆಯುವ ಪ್ರೀತಿ, ಪ್ರೀತಿಗೆ ಆದರ್ಶದ ಲೇಪ. ಆದರ್ಶಕ್ಕಾಗಿ ಸಾಮಾಜಿಕ ಕಟ್ಟುಪಾಡುಗಳನ್ನು-ಮಡಿವಂತಿಕೆಯನ್ನು ಉಲ್ಲಂಘಿಸುವ ಕಥೆಗಳು.  ಎರಡು: ಸಿಟ್ಟಿನ ಧಾರೆ. ಸಿಟ್ಟು ಸಮಾಜದ ಕಟ್ಟುಪಾಡುಗಳಿಗೆ ಸಂಬಂಧಿಸಿದ್ದಾಗಿರಬಹುದು, ಮೌಲ್ಯಗಳ ಬಂಧನದ ಬಗೆಗಿರಬಹುದು, ಮೌಲ್ಯಗಳ ಕುಸಿತದ ಬಗೆಗೂ ಇರಬಹುದು. ಈ ಸಿಟ್ಟನ್ನು ಶ್ರೀಕಾಂತರು ಎರಡು ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಒಂದು: ವ್ಯಂಗ್ಯ ಕುಹಕದ ದಾರಿ, ಎರಡು: ಅಸಹಾಯಕತೆಯ ದಾರಿ. ಭಾರತ್ ಮಾತಾಕೀ ಜೈ ಕುಹಕದ ಮಾದರಿಯಾದರೆ, ಕೀಚಕರು ಅಸಹಾಯಕತೆಯ-ಚಡಪಡಿಕೆಯ ಮಾದರಿಯಾಗಿದೆ.

ಸಣ್ಣ ಕಥೆಯೆಂದರೆ ಸಣ್ಣ ಕಥೆಯಷ್ಟೇ. ದೊಡ್ಡವಿಚಾರವನ್ನೂ, ಕಾದಂಬರಿಗಿರಬಹುದಾದ ಹರವನ್ನೂ ಮೂರ್ನಾಲ್ಕು ಪುಟಗಳಿಗೆ ಇಳಿಸುವ ಸಾಧ್ಯತೆಯನ್ನು ಶ್ರೀಕಾಂತರು ತೋರಿಸುತ್ತಾರೆ. ಆರ್ಜೆಂಟೀನಾದ ಲೇಖಕ ಹಾರ್ಹೆ ಲುಯಿ ಬೋರ್ಹೆಸ್ ಒಮ್ಮೆ ಹೇಳಿದ್ದನಂತೆ – ಕಾದಂಬರಿ ಬರೆಯಲು ಹತ್ತು ಪುಟಗಳಷ್ಟೇ ಸಾಕು ಮಿಕ್ಕದ್ದು ವಿವರಗಳ ಮಹಾಪೂರ. ತೆಲುಗಿನಲ್ಲಿ ಸತ್ಯಂ ಶಂಕರ ಮಂಚಿ ಯಾವದೇ ಕಥೆಯನ್ನು ಮೂರೇ ಪುಟಗಳಲ್ಲಿ ಬರೆಯುತ್ತಿದ್ದರು. ಆ ಕಥೆಗಳು ಸರಳವಾಗಿದ್ದರೂ ಅವುಗಳಿಗಿದ್ದ ಅನಂತ ಸಾಧ್ಯತೆಗಳು ಒಂದು ವಿಶಾಲವಾದ ಕ್ಯಾನ್ವಾಸನ್ನು ಒದಗಿಸುತ್ತಿತ್ತು. ಶ್ರೀಕಾಂತರ ಕಥನವೂ ಅದೇ ಚೌಕಟ್ಟಿಗೆ ಸೇರಿದ್ದು. ಸಣ್ಣ ವಾಕ್ಯಗಳು. ಅದಕ್ಕೇ ಇರುವ ಲಯ. ಲಯದಿಂದಲೇ ಉಂಟಾಗುವ ಒಟ್ಟಾರೆ ಅನುಭವ ಓದಿಗಿಂತ ಮಿಗಿಲಾದದ್ದೇನನ್ನೋ ನೀಡುತ್ತದೆ. ಉದಾಹರಣೆಗೆ ಈ ಸಾಲುಗಳನ್ನು ಕೇಳಿ: "ಲೇ ಅಂದರೆ ಅವಳೇ. ಪಾಪ ರಾಮಶೇಷು. ಪಾಪ ಮೂರನೇ ತಾಳಿ ಕಟ್ಟಿಸಿಕೊಂಡವಳು. ಪಾಪ ಅವಳಿಗೆ ಮೊದಲನೆಯದ್ದಾದರೂ ಯಜಮಾನ್ರು ಕಟ್ಟಿದ್ದು ಮೂರನೆಯದು. ಪಾಪ ಈ ಮನೆಗೆ ಬಂದಾಗಿನಿಂದಲೂ ಹೆರುವುದೇ ಕೆಲಸ.  ಪಾಪ ಒಂದಾದಮೇಲೊಂದು. ಪಾಪ ಒಂದಿನವಾದರೂ ಚಕಾರವೆತ್ತಿದವಳಲ್ಲ. ಪಾಪ...." (ಕಥೆ: ಕೊಡೆಯ ಕೆಳಗೆ, ಪುಟ:88). ಹೀಗೆ ರಾಮಶೇಷುವಿನ ವಿವರಣೆ ಮುಂದುವರೆಯುತ್ತದೆ. ಆ ವಿವರಣೆಯಲ್ಲಿ ಕಥೆ ಓದುತ್ತಿರುವ ನಿಶ್ಶಬ್ದ ವಾತಾವರಣದಲ್ಲಿ ಈ ಪಾಪ ಪದದ ಅನುರಣನ ಮೌನವನ್ನು ಭೇದಿಸುವ ಶಬ್ದವಾಗಿದೆ. ತಂತ್ರದ ದೃಷ್ಟಿಯಿಂದ ಇದು ಒಂದು ಅದ್ಭುತವೆಂದೇ ಹೇಳಬೇಕು. ಕಥೆಗಳನ್ನು ಕಣ್ಣಿಗೆ ಕಟ್ಟಿದ ಹಾಗೆ ನಿರೂಪಿಸುವುದನ್ನು ಕಂಡಿದ್ದೇವೆ. ಇವರ ಕಥೆಗಳು ಶ್ರಾವ್ಯರೂಪದಲ್ಲೂ ದಕ್ಕುತ್ತವೆ.

ಗಂಭೀರ ಶುಶ್ಕ ಕಥೆಗಳ ನಡುವೆ ಆಗಾಗ " ಸೊಸೆ ಮಾತಾಡಲಿಲ್ಲ"  ಎನ್ನುವಂತಹ ಲವಲವಿಕೆಯ ಕಥೆಗಳು ನುಸುಳಿ ಮನಸ್ಸಿಗೆ ಮುದ ನಿಡುತ್ತವೆ. ಬುದ್ಧಿಗೆ ಕಸರತ್ತು ನೀಡಿ ಮನಸ್ಸನ್ನು ವಿಚಲಿತಗೊಳಿಸುವ ಕಥೆಗಳ ನಡುವಿನಲ್ಲಿ ಆಗಾಗ ಇಂಥದೊಂದು ಕಥೆಯನ್ನು ನೀಡಿ ಶ್ರೀಕಾಂತರು ವೈವಿಧ್ಯವನ್ನೂ ನೀಡಿದ್ದಾರೆ.

ಆಧುನಿಕ ಕನ್ನಡ ಕಥೆಯ ಚರ್ಚೆಯಲ್ಲಿ ಶ್ರೀಕಾಂತರ ಭಿನ್ನ ಧ್ವನಿಯನ್ನು ನಾವು ಗುರುತಿಸಬೇಕಾದ ಅವಶ್ಯಕತೆ ಇದೆ. ಅವರು ಬರೆದ ಸಂದರ್ಭದಲ್ಲಿ ಆ ಕಥೆಗಳು ಎಷ್ಟು ಮುಖ್ಯವಾಗಿದ್ದುವೋ ಇಂದೂ ಅಷ್ಟೇ ಪ್ರಸ್ತುತವೆನ್ನಿಸುವಂತೆ ಇವೆ. 183ಪುಟಗಳ ಅವರ ಸಮಗ್ರ ಸಾಹಿತ್ವವನ್ನು ಪ್ರಸ್ತುತಪಡಿಸುತ್ತಾ ಕೆ.ನರಸಿಂಹಮೂರ್ತಿ, ಎಸ್.ದಿವಾಕರ್, ಪ್ರಧಾನ ಗುರುದತ್ತ, ರಾಮದಾಸ್, ಎಂ.ಎನ್.ವ್ಯಾಸರಾವ್, ಮಾಧವ ಕುಲಕರ್ಣಿಯಂತಹ ಮಹನೀಯರು ಬರೆದಿರುವ ಲೇಖನಗಳೂ ಶ್ರೀಕಾಂತರ ಸಾಹಿತ್ಯದ ಮಹತ್ವವನ್ನು ತೆರೆದಿಡುತ್ತವೆ. ಶ್ರೀಕಾಂತರ ಸಮಗ್ರ ಕಥೆಗಳು ಒಂದು ಮುಖ್ಯ ಪುಸ್ತಕವೆನ್ನುವುದರಲ್ಲಿ ಅನುಮಾನವಿಲ್ಲ. ಈ ಸಂದರ್ಭದಲ್ಲಿ ನಾವು ಆ ಮಹತ್ವವನ್ನು ಗುರುತಿಸಿ ಅವರ ದೇಣಿಗೆಯ ಮರುಮೌಲ್ಯಮಾಪನಮಾಡುವ ಅವಶ್ಯಕತೆ ಇದೆ.

ಭಾನುವಾರ, 05 ಆಗಸ್ಟ್ 2012


Wednesday, January 27, 2010

ಹೊಸ ಓದು: ಬಡ್ಡಿವ್ಯಾಪಾರಿಯ ಸಾವು - ಕಥನ ತಂತ್ರದ ಕೆಲವು ವಿಚಾರಗಳು

ಕಾದಂಬರಿ: Death of a Moneylender
ಲೇಖಕಿ - ಕೋಟ ನೀಲಿಮಾ

ಕೋಟ ನೀಲಿಮಾರ ಡೆಥ್ ಆಫ್ ಎ ಮನೀಲೆಂಡರ್ ಅನ್ನುವ ಇತ್ತೀಚಿನ ಪುಸ್ತಕ ಈಚೆಗೆ ಬರುತ್ತಿರುವ ಭಾರತೀಯರು ಬರೆಯುತ್ತಿರುವ ಇಂಗ್ಲೀಷ್ ಸಾಹಿತ್ಯದ ಸಂದರ್ಭದಲ್ಲಿ, ಒಂದು ಭಿನ್ನ ಲಹರಿಯನ್ನು ತರುತ್ತದೆ. ಇಂಗ್ಲೀಷಿನಲ್ಲಿ ಬರೆಯುವ ಭಾರತೀಯ ಬರಹಗಾರರು ಪಶ್ಚಿಮಾಭಿಮುಖವಾಗಿ ಯಾರನ್ನೋ ಮೆಚ್ಚಿಸಲು ಮಾತ್ರ ಬರೆಯುತ್ತಿದ್ದಾರೆ ಎನ್ನುವ ಆರೋಪ ಹೊರಿಸುವುದು ಅಸಮಂಜನವೇ ಸರಿ. ಆದರೆ ಇತ್ತೀಚಿನ ಬೆಳವಣಿಗೆಯನ್ನು ಕಂಡಾಗ, ಭಾರತ ಕೇಂದ್ರಿತವಾಗಿ ಬರುತ್ತಿರುವ ಬರವಣಿಗೆಯಲ್ಲಿ ನಮಗೆ ಐದು ಭಿನ್ನ ಎಳೆಗಳು ಕಾಣಿಸುತ್ತಿವೆ.

  • ಮೊದಲ ಎಳೆ ಭಾರತದ ಮೇಲ್ವರ್ಗವನ್ನು ಪ್ರತಿನಿಧಿಸುವ [ಆದರೆ ಸಾಹಿತ್ಯವನ್ನು ಪ್ರತಿನಿಧಿಸಲಾರದ] ಶೋಭಾ ಡೇ, ಚೇತನ್ ಭಗತ್ ಗಳು ಹರಿಯಬಿಡುತ್ತಿರುವ ಸಾಹಿತ್ಯ.
  • ಎರಡನೆಯ ಎಳೆ ಅರವಿಂದ ಅಡಿಗ, ಅರುಂಧತಿ ರಾಯ್ ಪ್ರತಿನಿಧಿಸುವ ಸಾಹಿತ್ಯ. ಇದರಲ್ಲಿ ಭಾರತದ ಮೂಲ ಎಳೆಗಳಿದ್ದರೂ, ಅವರುಗಳ ಮನಸ್ಸಿನಲ್ಲಿರು ಓದಗ ವೃಂದ ವಿಶ್ವವ್ಯಾಪಿಯಾದ್ದರಿಂದ ಅವರ ಬರವಣಿಗೆಯೂ ಸಾಕಷ್ಟು ಗ್ಲೋಬಲೈಸ್ಡ್ ಬರವಣಿಗೆಯಾಗಿರುತ್ತದೆ.
  • ನಿಜಕ್ಕೂ ವಿಶ್ವ ಸಾಹಿತ್ಯದ ವೇದಿಕೆಯ ಮೇಲೆ ಬರೆಯುತ್ತಾ ಭಾರತವನ್ನು ಆಗಾಗ ಸಂದರ್ಭ ಮಾಡಿಕೊಂಡು ಬರೆವ ಲೇಖಕರಾದ ವಿಕ್ರಂ ಸೇಠ್ ಮತ್ತು ಅಮಿತಾವ್ ಘೋಷ್ ಮೂರನೆಯ ಎಳೆಗೆ ಸೇರುತ್ತಾರೆ.
  • ನಾಲ್ಕನೆಯ ಎಳೆಯಲ್ಲಿ ಭಾರತೀಯ ಸಂಜಾತರಾಗಿ, ಇತರೆ ದೇಶದ ಪಾಸ್ ಪೋರ್ಟ್ ಹೊಂದಿರುವ, ಆಗಾಗ ಇಲ್ಲಿಗೆ ವಾಪಸ್ಸಾಗುವ, ತಮ್ಮ ನೆನಪಿನ ಗಣಿಯಿಂದ - ಅಥವಾ ಪ್ರವಾಸೀ ಬೆರಗಿನಿಂದ ಭಾರತವನ್ನು ನೋಡುವ ಆದರೂ ಸಮರ್ಥವಾಗಿ ಬರೆಯಬಲ್ಲ ಸಲ್ಮಾನ್ ರಶ್ದೀ, ಝುಂಪಾ ಲಹಿರಿಗಳದ್ದು.
  • ಐದನೆಯ ಎಳೆಯಲ್ಲಿ ರಾಜಾರಾವ್ ಶಶಿ ದೇಶಪಾಂಡೆ, ಕೆ.ಆರ್. ಉಷಾರಂತೆ ಸ್ಥಳೀಯ ಸಂವೇದನೆಯನ್ನು ಇಂಗ್ಲೀಷಿನಲ್ಲಿ ಸಮರ್ಥವಾಗಿ ಬಿಂಬಿಸುವ, ಸಾಧ್ಯವಾಗಿದ್ದರೆ ತಮ್ಮ ತಮ್ಮ ಭಾಷೆಗಳಲ್ಲಿಯೇ ಸಾಹಿತ್ಯ ರಚಿಸಬಹುದಾಗಿದ್ದ ಪರಂಪರೆಯ ಬರಹಗಾರರು. ಈ ಪರಂಪರೆಗೆ ಈಚಿನ ಸೇರ್ಪಡೆ ಕೋಟ ನೀಲಿಮಾ ಎನ್ನುವ ಲೇಖಕಿಯದ್ದು ಅನ್ನಿಸುತ್ತದೆ.

ಇತ್ತೀಚೆಗೆ ಬಂದ ಆಕೆಯ ಡೆಥ್ ಆಫ್ ಎ ಮನೀಲೆಂಡರ್ ಅನ್ನುವ ಕಾದಂಬರಿ ಅನೇಕ ಕಾರಣಗಳಿಗಾಗಿ ಹಚ್ಚಿನ ಚರ್ಚೆಗೊಳಪಡಬೇಕಿತ್ತು. ಆ ಪುಸ್ತಕದ ಬಗ್ಗೆ ಹೆಚ್ಚಿನ ವಿಮರ್ಶೆಗಳೂ ಬರಬೇಕಿತ್ತು. ಆದರೆ ಆ ಪುಸ್ತಕದ ಬಗ್ಗೆ ಹೆಚ್ಚೆನ ಚರ್ಚೆಯೇ ನನಗೆ ಕಂಡಿಲ್ಲ. ಅದಕ್ಕೆ ನಮ್ಮ ಮೀಡಿಯಾದ ಬ್ರೇಕಿಂಗ್ ನ್ಯೂಸ್ ಲೋಲುಪತೆಯೇ ಕಾರಣವಿರಬಹುದು. ಈ ಗಡಿಬಿಡಿಯ ಜೀವನದ ನಡುವಿನಲ್ಲಿ ಪತ್ರಕರ್ತರ ಕಾರ್ಯವೈಖರಿ, ಹಾಗೂ ನಗರಪ್ರದೇಶದಿಂದ ದೂರವಿರುವ "ಸೆಕ್ಸಿ" ಅಲ್ಲದ ವಿಷಯಗಳ ಬಗ್ಗೆ ತುಸು ತಾಳ್ಮೆಯಿಂದ- ಸಂಶೋಧನಾ ಮನೋಭಾವದಿಂದ ಬರೆಯಬಹುದಾದ ಪತ್ರಕರ್ತರಿಲ್ಲದ ಈ ಸಮಯದಲ್ಲಿ - ಅದೂ ಪ್ರಿಂಟ್ ಮೀಡಿಯಾದ ಸಂದರ್ಭದಲ್ಲಿ ಬರೆಯಲ್ಪಟ್ಟಿರುವ ಈ ಕಾದಂಬರಿ ನನ್ನ ಮಟ್ಟಿಗೆ ಬೆಚ್ಚನೆಯ ಬದಲಾವಣೆಯನ್ನು ಸೂಚಿಸಿದ್ದರಿಂದ ತುಂಬಾ ಹಿಡಿಸಿತು ಅನ್ನಿಸುತ್ತದೆ.

ನೀಲಿಮಾ ಅವರ ಕಾದಂಬರಿ ಪ್ರಾರಂಭವಾಗುವುದು ದೆಹಲಿಯ ಪತ್ರಿಕಾ ಕಾರ್ಯಾಲಯಕ್ಕೆ ಬರುವ ಸುದ್ದಿಯನ್ನು ಹೇಗೆ ವಿಶ್ಲೇಶಿಸಬೇಕು - ಅನ್ನುವ ಪ್ರಶ್ನೆಯನ್ನು ಹಿಡಿದು. ಯಾವುದೋ ದೂರದ ಗ್ರಾಮದಲ್ಲಿ ಒಂದು ಸಾವು ಉಂಟಾಗಿದೆ. ಸಾವು ಸಹಜವಾದ ಸಾವಲ್ಲ. ಸತ್ತಿರುವುದೂ ಸಾಧಾರಣ ವ್ಯಕ್ತಿಯಲ್ಲ. ಆಗಿರುವುದು ಒಬ್ಬ ಬಡ್ಡಿವ್ಯಾಪಾರಿಯ ದುರ್ಮರಣ. ಆತನ ಶವ ಊರ ನಡುವಿನ ದೀಪದ ಕಂಬದಿಂದ ನೇತಾಡುತ್ತಿದೆ. ಈ ರೀತಿಯ ಸುದ್ದಿ ಸಹಜವಾಗಿ ಒಂದು ರೀತಿಯ ರಂಜಕತೆಯನ್ನುಂಟು ಮಾಡುವುದು ನಿರೀಕ್ಷಿತವೇ. ಇದು ಓದುಗರ ಗಮನವನ್ನು ಆಕರ್ಷಿಸುವ ಮುಖ್ಯಸುದ್ದಿಯಾಗಬಹುದು. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಿ - ಆ ಮರಣದ ಹಿನ್ನೆಲೆಯನ್ನು ವಿವರಿಸುವ ಕೆಲಸ, ಅದರಿಂದ ಅಲ್ಲಿನ ಪರಿಸ್ಥಿತಿಯ ಬಗ್ಗೆ ಒದುಗರಿಗೆ ಒಂದು ಸೂಚನೆ ಕೊಡುವ ಕಾರ್ಯಧರ್ಮ ಪತ್ರಕರ್ತರದ್ದು. ಅಲ್ಲಿಗೆ ಹೋಗುವ ತಾಳ್ಮೆ, ಅಲ್ಲಿಂದ ವಿವರಗಳನ್ನು ಸಂಗ್ರಹಿಸಿ, ವಿಶ್ಲೇಶಿಸಿ, ವರದಿಮಾಡುವ, ಅದೇ ಕಾಲಕ್ಕೆ ಒದುಗರ ಗಮನವನ್ನೂ ಹಿಡಿದಿಡುವ, ಹಾಗೂ ತನ್ನ ಮೇಲಿನವರಿಂದ ಮೆಚ್ಚುಗೆಯನ್ನೂ ಪಡೆವ ಕೆಲಸವನ್ನು ಆ ಬೀಟ್ ಪಡೆದ ಪತ್ರಕರ್ತ ಮಾಡಬೇಕಾಗುತ್ತದೆ.

ಹೀಗೆ ಪ್ರಾರಂಭವಾಗುವ ಕಾದಂಬರಿ, ಅನೇಕ ಸಮಕಾಲೀನ ವಿಷಯಗಳನ್ನು ಉದ್ವೇಗರಹಿತವಾಗಿ ಚರ್ಚಿಸುತ್ತದೆ. ಫಲಕ್ ಅನ್ನುವ ಪತ್ರಕರ್ತನಿಗೆ ಈ ಮರಣದ ಹಿನ್ನೆಲೆಯನ್ನು ಕಂಡುಹಿಡಿವ, ಆ ಬಗ್ಗೆ ವರದಿಮಾಡುವ ಕೆಲಸವನ್ನು ಒಪ್ಪಿಸಲಾಗುತ್ತದೆ. ಆತ ತನ್ನ ವೃತ್ತಿಯ ಏಣಿಯನ್ನು ತ್ವರಿತವಾಗಿ ಏರಬೇಕೆನ್ನುವ ತವಕದಲ್ಲಿರುವ ಮಹತ್ವಾಕಾಂಕ್ಷೀ ವರದಿಗಾರ. ಈಗಾಗಲೇ ಅವನು ತನ್ನ ಪತ್ರಿಕೆಯಲ್ಲಿ ಪಡೆಯಬೇಕಾದ ಬಡ್ತಿಯನ್ನು ಪಡೆದಿದ್ದಾನೆ. ಮುಂದಿನ ಬಡ್ತಿ ಪಡೆದು ಯಶಸ್ವೀ ಪತ್ರಕರ್ತನಾಗಲು ಆತ ಏನು ಮಾಡಲೂ ಸಿದ್ಧ. ಯಶಸ್ವೀ ಪತ್ರಕರ್ತನಿಗೂ ಉತ್ತಮ ಪತ್ರಕರ್ತನಿಗೂ ವ್ಯತ್ಯಾಸವಿರಬಹುದೆನ್ನುವ ಸಾಧ್ಯತೆಯನ್ನು ಆ ಕಾದಂಬರಿಯಲ್ಲಿ ಸೂಚಿಸುವವಳು ತನ್ನ ಮಾಜಿ ಗೆಳತಿ - ಹಾಗೂ ಮತ್ತೊಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬಾಕೆ. ಒಂದು ರೀತಿಯಲ್ಲಿ ಆಕೆ ಕಾದಂಬರಿಯುದ್ದಕ್ಕೂ ಫಲಕ್ ನ ಆತ್ಮಸಾಕ್ಷಿಯ ಪ್ರತೀಕವಾಗಿ ಆಗಾಗ ತಲೆಹಾಕುತ್ತಾಳೆ. ಆಕೆಯ ದೃಷ್ಟಿಯಲ್ಲಿ ಪತನಗೊಳ್ಳದೆಯೇ ತಾನು ಹೇಗೆ ಯಶಸ್ವಿಯಾಗುವುದು - ಅರ್ಥಾತ್ ಆತ್ಮವನ್ನು ಮಾರಿಕೊಳ್ಳದೆಯೇ ಹೇಗೆ ವೃತ್ತಿಯಲ್ಲಿ ಮೇಲೇರುವುದು ಅನ್ನುವ ಪ್ರಶ್ನೆ ಫಲಕ್ ನನ್ನು ಕಾದಂಬರಿಯುದ್ದಕ್ಕೂ ಕಾಡುತ್ತದೆ. ಆಕೆಗೆ ಇದರಲ್ಲಿ ಯಾವ ದ್ವಂದ್ವವೂ ಕಾಣುವುದಿಲ್ಲವಾದರೂ, ಆತನಿಗೆ ಮಾತ್ರ ಯಶಸ್ಸಿನ ಚಡಪಡಿಕೆ ಇದ್ದೇ ಇರುತ್ತದೆ.

ಇಲ್ಲಿ ಒಬ್ಬ ಬಡ್ಡಿವ್ಯಾಪಾರಿಯ ಸಾವು ಅದರ ಹಿಂದಿನ ಕಾರಣಗಳನ್ನು ಹುಡುಕುವ ಪತ್ತೆದಾರಿಕೆಯು ಒದುಗರನ್ನು ಹಿಡಿದಿಡುವ ಒಂದು ಸೂತ್ರವಾಗಿದೆ. ಈ ಪತ್ತೆದಾರಿಕೆಯ ಕುತೂಹಲವನ್ನು ಬುನಾದಿಯಾಗಿಟ್ಟುಕೊಂಡು ಲೇಖಕಿ ಅನೇಕ ಕಷ್ಟದ ಪ್ರಶ್ನೆಗಳನ್ನು ಕೇಳುತ್ತಾರೆ. ಉದಾಹರಣೆಗೆ ನಾವುಗಳು ಬರೇ ರೈತರ ಆತ್ಮಹತ್ಯೆಗಳ ಬಗ್ಗೆ ಮಾತ್ರ ಕೇಳುತ್ತಿದ್ದೇವೆ. ಆದರೆ ಯಾವ ಬಡ್ಡಿ ವ್ಯಾಪಾರಿಯ ಆತ್ಮಹತ್ಯೆಯೂ ಕೇಳಿಬಂದಿಲ್ಲ? ಹಾಗೆ ಒಬ್ಬ ಬಡ್ಡಿವ್ಯಾಪಾರಿಯ ಮರಣವಾದಾಗ ಅದಕ್ಕೆ ಪತ್ರಿಕೆಗಳು ಎಷ್ಟು ಸ್ಥಳವನ್ನು ಕಾಯ್ದಿರಿಸಬೇಕು? ಒಬ್ಬ ಬಡ್ಡಿವ್ಯಾಪಾರಿಯ ಸಾವು ಅನೇಕ ರೈತರ ಆತ್ಮಹತ್ಯೆಗಿಂತ ಹೆಚ್ಚಿನ ಸುದ್ದಿಪುಟಗಳನ್ನ ಆಕ್ರಮಿಕೊಳ್ಳುವುದಕ್ಕೆ ಕಾರಣವೇನಿರಬಹುದು? ಇದರಲ್ಲಿರಬಹುದಾದ ಪತ್ರಿಕಾ ವ್ಯಾಪರದ "ಧರ್ಮ" ಏನು? ಈ ಎಲ್ಲ ಪ್ರಶ್ನೆಗಳನ್ನೂ ನೀಲಿಮಾ, ಕೇಳದೆಯೇ ಕೇಳುತ್ತಾರೆ.

ಹೀಗೆ ಒಬ್ಬ ಪತ್ರಕರ್ತನ ಆಂತರಿಕ ತಲ್ಲಣಗಳನ್ನು ಮನಸ್ಸಿನ ವಿರೋಧಾಭಾಸಗಳನ್ನು ಓದುಗರ ಮುಂದಿಡುತ್ತಲೇ, ಸಹಜವಾಗಿ ಕೃಷಿಯ ಲಾಭದಯಕತೆ, ಗ್ರಾಮಜೀವನದಲ್ಲಿನ ಇತರ ತಲ್ಲಣಗಳು, ಸ್ಥಳೀಯ ಸಾಮಾಜಿಕ ಪದ್ಧತಿಯ ಪದರಗಳನ್ನು ನೀಲಿಮಾ ಬಿಚ್ಚಿಡುತ್ತಾ ಹೋಗುತ್ತಾರೆ. ಪತ್ರಕರ್ತರಿಗೆ ತಮ್ಮ ವೃತ್ತಿಜೀವನದಲ್ಲಿ ಜೀವನದಲ್ಲಿ ಕಂಡೂ ಪತ್ರಿಕಾ ವೃತ್ತಿಯ ಮಿತಿಗಳಲ್ಲಿ ನಿರೂಪಿಸಲಾಗದ ಕಥೆಗಳನ್ನು ಒಂದೊಂದಾಗಿ ಈ ಕಾದಂಬರಿಯ ಮೂಲಕ ಆಕೆ ಬಿಚ್ಚುತ್ತಾ ಹೋಗುತ್ತಾರೆ.

ಮೂಲಭೂತವಾಗಿ ಬಡ್ಡಿವ್ಯಾಪಾರಿಗಳೆಂದರೆ ಸಿಕ್ಕಸಿಕ್ಕ ಜನರನ್ನೆಲ್ಲಾ ಶೋಷಣೆಗೊಳಪಡಿಸಿ, ಅವರ ರಕ್ತವನ್ನು ಹೀರಿ ಜೀವನ ಮಾಡುವವರು ಅನ್ನುವ ಭಿತ್ತಿಯನ್ನು ನಾವೆಲ್ಲಾ ಹೊತ್ತು ತಿರುಗುತ್ತಿರುತ್ತೇವೆ. ಹೀಗಾಗಿ, ಒಂದು ಗ್ರಾಮದಲ್ಲಿ ಊರಿನ ಮಧ್ಯೆ ಒಬ್ಬ ಬಡ್ಡಿವ್ಯಾಪಾರಿಯ ಶವ ದೀಪದ ಕಂಬದಿಂದ ನೇತಾಡುತ್ತಿದೆಯೆಂದರೆ ಅದರಲ್ಲಿ ಯಾವುದೋ ರೀತಿಯ ರಕ್ತಕ್ರಾಂತಿಯ ಮೊದಲ ಬೀಜಗಳು ಕಾಣಬಹುದು ಅನ್ನುವ ಭಾವನೆ ಸಹಜವೇ ಆಗಿದೆ. ಹೀಗಾಗಿ ಈ ರೀತಿಯ ಕಥೆ ಒದುಗರ ಆಸಕ್ತಿಯನ್ನು ಹಿಡಿದಿಡುತ್ತದೆ ಎನ್ನುವುದನ್ನು ಪರಿಗಣಿಸಿ, ಇದರ ಸುತ್ತಲೂ ಆಕೆ ತನ್ನ ಕಥನವನ್ನು ಹಣೆಯುತ್ತಾರೆ. ಹೀಗೆ, ಗ್ರಾಮ್ಯ ಜೀವನದಲ್ಲಿರುವ ಅನೇಕ ಪದರಗಳನ್ನು ಆಕೆ ಬಿಚ್ಚಿಡುವುದರಲ್ಲಿ ಸಫಲರಾಗುತ್ತಾರೆ. ಹೀಗಾಗಿಯೇ ನಗರ ಪ್ರದೇಶದಲ್ಲಿ ಬದುಕುವವರು ಕೃಷಿ ಮತ್ತು ಗ್ರಾಮ್ಯ ಜೀವನದ ಬಗ್ಗೆ ತಲೆಯಲ್ಲಿ ತುಂಬಿಕೊಂಡಿರಬಹುದಾದ ಸ್ಟೀರಿಯೋಟೈಪ್ ಗಳನ್ನೂ ಮರುಪರೀಕ್ಷಿಸುವುದು ಈ ಕಾದಂಬರಿಯಿಂದಾಗಿ ಸಾಧ್ಯವಾಗುತ್ತದೆ.

ಆದರೆ ನೀಲಿಮಾಗೆ ಕಥನದ ಹಿಡಿತವಿದ್ದರೂ, ಕಥೆ ಕಟ್ಟುವ ಕಲೆಯಿನ್ನೂ ಪೂರ್ತಿಯಾಗಿ ಒಗ್ಗಿ ಬಂದಿಲ್ಲವೇನೋ. ಆದ್ದರಿಂದಲೇ ಈ ಕಾದಂಬರಿ ಸೆಳೆಯಬೇಕಾದಷ್ಟು ಗಮನವನ್ನು ಸೆಳೆದಿಲ್ಲವೇನೋ. ಕಥನದ ಪ್ರಕ್ರಿಯೆಯಲ್ಲಿ - ಎತ್ತಿಕೊಂಡ ಪ್ರತಿ ವಿಷಯಕ್ಕೂ ಒಂದು ಅಂತ್ಯವಿರಬೇಕು, ಪ್ರತಿ ಪಾತ್ರವೂ ಒಂದು ಹಂತವನ್ನು ತಲುಪಿ ಪರಿಪೂರ್ಣವಾಗಬೇಕು ಅನ್ನುವ ನಂಬಿಕೆಯ ತುರ್ತು ಈ ಕಥನಕ್ಕೆ ಮುಳುವಾಗುತ್ತದೆ. ಸಹಜವಾಗಿಯೇ ಕಥೆ/ಕಾದಂಬರಿ ಬರೆಯುವವರಿಗೂ, ಪತ್ರಿಕಾ ವರದಿಯ ಶಿಸ್ತನಡಿಯಲ್ಲಿ ಬರವಣಿಗೆ ಮಾಡುತ್ತಿರುವವರಿಗೂ ಇರಬಹುದಾದ ವ್ಯತ್ಯಾಸ ನಮಗೆ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಪತ್ರಿಕಾ ವರದಿಯಲ್ಲಿ ಸಾಮಾನ್ಯವಾಗಿ ಹುಡುಕುವ ತಕ್ಷಣ-ಸಮಾಧಾನ, ಈಕ್ಷಣದ ಉತ್ತರ, ಈಕ್ಷಣದ ಸತ್ಯದ ತುರ್ತು ಕಾದಂಬರಿಯ ಹರವಿಗಿರುವುದಿಲ್ಲ. ಹೀಗಾಗಿ ಕಾದಂಬರಿಯಲ್ಲಿ ಎಲ್ಲವಿಚಾರಗಳನ್ನು ಅರಗಿಸಿ, ಮಥಿಸಿ ಒಂದು ಗುಳಿಗೆಯಲ್ಲಿ ಎಲ್ಲವನ್ನೂ ಅಡಕ ಮಾಡುವ ತುರ್ತೂ ಲೇಖಕಿಗಿರುವುದಿಲ್ಲ. ಕಾದಂಬರಿಯ ಹರವಿನಲ್ಲಿ ಈ ಎಲ್ಲ ಮಥನದ ಯಾನವನ್ನು ಓದುಗನೊಂದಿಗೇ ಲೇಖಕಿ ಕೈಗೂಳ್ಳಬಹುದು. ಹೀಗಾಗಿ ಅಲ್ಲಿ ಬರುವ ಪಾತ್ರಗಳ ವ್ಯಕ್ತಿತ್ವದಲ್ಲಿರುವ ಅನೇಕ ಮಜಲುಗಳನ್ನು, ಗೊಂದಲಗಳನ್ನೂ, ವೈವಿಧ್ಯವನ್ನೂ ಬಿಡಿಸಿಡಲು ಕಾದಂಬರಿಯ ಹರವಿಗೆ ಸಾಧ್ಯವಿದೆ. ನೀಲಿಮಾ ಈ ರೀತಿಯ ಭಿನ್ನತೆಯನ್ನು ಫಲಕ್ ನ ಪಾತ್ರದಲ್ಲಿ ತರಲು ಸಫಲರಾದರೂ ಮಿಕ್ಕ ಪಾತ್ರಗಳನ್ನು ತುಂಬುವುದರಲ್ಲಿ ತುಸು ವಿಫಲರೇ ಆಗುತ್ತಾರೆ. ಉದಾಹರಣೆಗೆ ದೀಪದ ಕಂಬಕ್ಕೆ ಏರಿದ ಬಡ್ಡಿವ್ಯಾಪಾರಿ ದುಷ್ಟನಲ್ಲವೇ ಅಲ್ಲ, ಬದಲಿಗೆ ಮಿಕ್ಕ ಬಡ್ಡಿವ್ಯಾಪಾರಿಗಳ ಹಾಗಿರದೇ ಕರುಣಾಳುವಾಗಿದ್ದ ಎನ್ನುವ ವಿಚಾರ ಕಾದಂಬರಿಯ ಮೊದಲ ಭಾಗದಲ್ಲಿಯೇ ಬರುತ್ತದೆ. ಹಾಗಾದರೆ ಅವನಿಗೆ ಈ ದುರ್ಮರಣ ಬಂದದ್ದು ಯಾಕೆ - ಅದಕ್ಕೆ ಕಾದಂಬರಿಯ ಅಂತ್ಯದಲ್ಲಿ ವಿವರಣೆಯಿದೆಯಾದರೂ, ಆ ವಿವರಣೆ ತೀರಾ ಬಾಲಿಶ ಮತ್ತು ಒಳ್ಳೆಯತನದ ಮಹಾಪೂರದಿಂದ ಕೂಡಿದ್ದಾಗಿದೆ. ಹೀಗಾಗಿಯೇ ಆ ಸಾವಿನಿಂದ ಆಗಬಹುದಾದ ಲೇಖಕಿಯ ಉದ್ದೇಶಿತ ಪರಿಣಾಮ ನಿಜಕ್ಕೂ ಆಗಬಹುದೇ ಅನ್ನುವ ಅನುಮಾನ ಓದುಗನನ್ನು ಕಾಡುತ್ತದೆ. ಸತ್ತ ಬಡ್ಡಿವ್ಯಾಪಾರಿಯ ಪಾತ್ರದ ಹಲವು ಮಜಲುಗಳನ್ನು ಆಕೆ ಇತರರ ನೆನಪುಗಳ ಮೂಲಕ ತರಲು ಪ್ರಯತ್ನಸಿತ್ತಾರಾದರೂ ಆ ಪಾತ್ರದ ತಲ್ಲಣಗಳು ಕಾದಂಬರಿಯಲ್ಲಿ ಎಲ್ಲೂ ಹೊರಬರುವುದೇ ಇಲ್ಲ. ಹೀಗಾಗಿ ಆ ಪಾತ್ರ ಒಂದೇ ಆಯಾಮದ ಪಾತ್ರದಂತೆ ಕಂಡುಬಿಡುತ್ತದೆ.

ಒಳಿತು ಮಾಡುತ್ತಿದ್ದ ಈ ಮನುಷ್ಯ ಹೀಗೆ ದುರ್ಮರಣ ಹೊಂದಿದರೆ, ಕೆಡುಕು ಮಾಡುವವರಿಗೆ ಇನ್ನೂ ದಾರುಣವಾದ ಸಾವು ಕಾದಿರಬಹುದೆಂಬ ಬೆದರಿಕೆಯ ಸೂತ್ರ ಕಥೆಯುದ್ದಕ್ಕೂ ಇದೆಯಾದರೂ - ಅದೇ ಪತ್ರಿಕೆಯಲ್ಲಿ ಮುಖ್ಯ ಸುದ್ದಿಯಾಗಬಹುದೆಂದು ಅನ್ನಿಸಿದರೂ, ಅದರಿಂದ ಆಗಬಹುದಾದ ಮಿಕ್ಕ ಫಲಿತಗಳ ಬಗ್ಗೆ ನೀಲಿಮಾ - ಅಥವಾ ಅವರ ಪಾತ್ರಗಳು ಯೋಚಿಸುವುದೇ ಇಲ್ಲ. ಹೀಗಾಗಿ ಕಥೆಗೆ ಇರಬೇಕಾದ ಹಲವು ಮಗ್ಗಲುಗಳು ಒಂದು ಸತ್ಯ ಸುಳ್ಳಿನ ನಡುವಿನ - ಹೌದೋ ಇಲ್ಲವೋ ಅನ್ನುವ ಬೈನರಿಯಾಗಿ ನಿಂತುಬಿಡುತ್ತದೆ. ಜೀವನದ ಸಂಕೀರ್ಣತೆ ಒಳಿತು-ಕೆಡುಕಿನ ಹೌದು-ಇಲ್ಲದ ಈ ಬೈನರಿ ವಿಧಾನದಲ್ಲಿ ಗ್ರಾಹ್ಯವಾಗುವುದಿಲ್ಲವಾದ್ದರಿಂದಲೇ ಅದ್ಭುತವಾಗಬಹುದಾಗಿದ್ದ ಈ ಬೆಚ್ಚನೆಯ ಬರವಣಿಗೆ ಬರೇ ಉತ್ತಮ ಬರವಣಿಗೆ ಮಾತ್ರವಾಗಿ ಸೊರಗಿಬಿಡುತ್ತದೆ.

ನೀಲಿಮಾ ಕಾದಂಬರಿಯನ್ನು ಓದಿದಾಗ ಒಂದು ಉತ್ತಮ ಕಥೆಯನ್ನು ಸಾಧಾರಣವಾಗಸುವಲ್ಲಿ ಕಥನ ತಂತ್ರದ ಪಾತ್ರ ಮಹತ್ವದ ಬಗ್ಗೆ ಆಲೋಚನೆಗಳು ಸಹಜವಾಗಿಯೇ ಬಂದುವು. ಯಾವುದೇನೇ ಇದ್ದರೂ, ಈ ಬ್ರೇಕಿಂಗ್ ನ್ಯೂಸ್ ಯುಗದಲ್ಲಿ, ಕೋರ್ಟುಗಳಿಗಿಂತ ಮುನ್ನವೇ ವಿಷಯಗಳನ್ನು ಎತ್ತಿ ಜನರ ಕಣ್ಣೆದುರಿಗೆ ಐದು ಕಮರ್ಷಿಯಲ್ ಬ್ರೇಕುಗಳನಡುವೆ ನಾಲ್ಕು ಪ್ರಶ್ನೆಗಳನ್ನೊಗೆದು ತೀರ್ಪು ನೀಡುತ್ತಿರುವ ಈ ದೃಶ್ಯಮಾಧ್ಯಮದ ಧಾಳಿಯ ನಡುವೆ ಹೀಗೂ ವಿಚಾರಗಳನ್ನು ವಿಶ್ಲೇಷಿಸಬಹುದೆನ್ನುವ ಪತ್ರಿಕಾಧರ್ಮವನ್ನು ಒಂದು ರೀತಿಯಿಂದ ಎತ್ತಿ ಹಿಡಿಯುವ ಈ ಕಾದಂಬರಿ ಇನ್ನಷ್ಟು ಚರ್ಚಿತಗೊಳ್ಳಬೇಕಿತ್ತು ಅನ್ನಿಸುತ್ತದೆ. ಕಥನ ಸಂಭ್ರಮವಿಲ್ಲದಿದ್ದಾಗ್ಯೂ ಕಟ್ಟುವ ಕಲೆಯಲ್ಲಿ ನ್ಯೂನತೆಗಳಿದ್ದಾಗ್ಯೂ ಈ ಕಾದಂಬರಿ ನನ್ನ ದೃಷ್ಟಿಯಲ್ಲಿ ಮಹತ್ವದ್ದಾಗಿಯೇ ಉಳಿದಿದೆ. ಆದರೆ ಪತ್ರಕರ್ತೆ ನೀಲಿಮಾ ತನ್ನ ವೃತ್ತಿಯಲ್ಲಿ ಕಂಡುಕೊಂಡ ಲಿಮಿಟೇಷನ್ನನ್ನು ಕಾದಂಬರಿಯ ಕಥನ ತಂತ್ರದ ಮೂಲಕ ಭೇದಿಸಿದ ದಿನ ಹಚ್ಚಿನ ಚರ್ಚಿತರಾಗಬಹುದೆಂಬ ನಂಬಿಕೆ, ಹಾಗೂ ಆಕೆ ಉತ್ತಮ ಪತ್ರಕರ್ತೆಯಿಂದ ಉತ್ತಮ ಕಾದಂಬರಿಗಾರ್ತಿಯಾಗಿ ಬೆಳೆಯಲು ಸಾಧ್ಯ ಎನ್ನುವುದು ಅವರ ಬರವಣಿಗೆ ಸೂಚಿಸುತ್ತದೆ.


Monday, October 5, 2009

ಭೂಗತ ಜಗತ್ತಿನ ಒಳನೋಟಗಳು


ಸುಧೀರ್ ವೆಂಕಟೇಶ್ ಅವರ ಗ್ಯಾಂಗ್ ಲೀಡರ್ ಫರ್ ಎ ಡೇ ಒಂದು ಕುತೂಹಲಕಾರಿ ಪುಸ್ತಕ. ನಿಜಕ್ಕೂ ಈ ಪುಸ್ತಕ ಗಂಭೀರ ಬರವಣಿಗೆ ಮತ್ತು ಜನಪ್ರಿಯ ಬರವಣಿಗೆಯ ಮಧ್ಯೆ ತೂರಾಡುತ್ತಾ, ಕಡೆಗೆ ಅನೇಕ ಪ್ರಶ್ನೆಗಳನ್ನು ಎಬ್ಬಿಸಿ ಅವುಗಳನ್ನು ಉತ್ತರಿಸಲು ಪ್ರಯತ್ನಿಸದೆಯೇ ನಿಂತುಬಿಡುತ್ತದೆ. ಹೀಗೆ ಎಲ್ಲಕ್ಕೂ ಉತ್ತರವನ್ನು ನೀಡುವುದು ಸುಧೀರ್ ಅವರ ಉದ್ದೇಶವೂ ಅಲ್ಲ, ಅದು ಸಾಧ್ಯವೂ ಆಗುವುದಿಲ್ಲ ಎನ್ನುವ ಭಾವನೆ ನಮಗೆ ಬರುವುದರಲ್ಲಿ ಯಾವ ಸೋಜಿಗವೂ ಇಲ್ಲ. ಆದರೂ ಈ ಪುಸ್ತಕವನ್ನು ನಾವು ಓದಿ ಚರ್ಚಿಸಬೇಕಾದ ಅವಶ್ಯಕತೆಯಿದೆ.

ಸುಧೀರ್ ಶಿಕಾಗೋ ನಗರದಲ್ಲಿನ ಬಡತನವನ್ನು [ಅರ್ಬನ್ ಪಾವರ್ಟಿ] ಅರ್ಥಮಾಡಿಕೊಳ್ಳಲು ಅದರ ಬಗ್ಗೆ ಸಂಶೋಧನೆ ನಡೆಸಿ ಮಹಾಪ್ರಬಂಧ ಬರೆಯಲೆಂದು ಆ ನಗರದ ರಾಬರ್ಟ್ ಟೇಲರ್ ಹೋಮ್ಸ್ ಕಡೆಗೆ ಮೊದಲಿಗೆ ಹೊರಡುತ್ತಾರೆ. ಅವರು ಶುದ್ಧ ರಿಸರ್ಚ್ ವಿದ್ಯಾರ್ಥಿಯಾಗಿ ಕೈಯಲ್ಲಿ ಒಂದು ಪ್ರಶ್ನಾವಳಿಯನ್ನು ಹಿಡಿದು ಅದನ್ನು ಒಂದು ರಟ್ಟಿನ ಕ್ಲಿಪ್ಪಿನ ಕೆಳಗೆ ತೂರಿಸಿ, ಅಲ್ಲಿನ ಮನೆಗಳ ಪಟ್ಟಿಯಿಂದ ತಮ್ಮ ಸಂಶೋಧನಾ ನಿಯಮಾವಳಿಯನುಸಾರ ಯಾರನ್ನೆಲ್ಲಾ ಮಾತನಾಡಿಸಬೇಕೆಂಬ ಯಾದಿಯನ್ನು ತಯಾರು ಮಾಡಿ, ಆ ಜನವಸತಿಯನ್ನು ಪ್ರವೇಶಿಸುತ್ತಾರೆ. ಸಂಶೋಧನಾ ಪದ್ಧತಿಯ ದೃಷ್ಟಿಯಿಂದ ಅವರ ತಯಾರಿಯಲ್ಲಿ ಯಾವ ನ್ಯೂನತೆಯೂ ಇಲ್ಲವಾದರೂ ಈ ಪದ್ಧತಿಯ ಅರ್ಥಹೀನತೆಯನ್ನು ಸುಧೀರ್ ಶೀಘ್ರದಲ್ಲೇ ಗ್ರಹಿಸುತ್ತಾರೆ. ಇಲ್ಲ - ಸುಧೀರ್ ಪದ್ಧತಿಯ ಅರ್ಥಹೀನತೆಯನ್ನು ಹಿಡಿದು ಲೇವಡಿ ಮಾಡುವುದಿಲ್ಲ. ಸರ್ವೇ ಮೂಲಕ ಮಾಹಿತಿಯನ್ನು ಸಂಗ್ರಹಿಸುವ ರೀತಿಯನ್ನು ಅವರು ಟೀಕಿಸುವುದೂ ಇಲ್ಲ. ಆದರೆ ಹೀಗೆ ಸಂಗ್ರಹಿಸಿದ ಮಾಹಿತಿಯಿಂದ ಬರಬಹುದಾದ ಗ್ರಹಿಕೆ ಮತ್ತು ಈ ಗ್ರಹಿಕೆ ಸರಕಾರೀ ನೀತಿಯನ್ನು ಯಾವರೀತಿಯಿಂದ ರೂಪಿಸಬಹುದು ಹಾಗೂ ಅದರ ಮಿತಿಗಳೇನು ಅನ್ನುವುದನ್ನು ಅವರು ಸೂಕ್ಷ್ಮವಾಗಿ ನಮ್ಮ ಮುಂದಿಡುತ್ತಾರೆ. ಅದಕ್ಕೆ ಕಾರಣ: ನಾವು ಎದುರಿಸುತ್ತಿರುವ ಸಮಸ್ಯೆ ಅತೀ ಜಟಿಲವಾದದ್ದು, ಅನೇಕ ಪದರಗಳನ್ನೂ, ಒಳಕಥೆಗಳನ್ನೂ ಒಳಗೊಂಡದ್ದು. ಅದಕ್ಕೆ ನಾವು ಕಂಡುಕೊಳ್ಳುತ್ತಿರುವ ಉತ್ತರ ಸರಕಾರಿ ನೀತಿಗೆ ಅಡಕವಾಗಬೇಕಿದ್ದರೆ ಸರಳವಾಗಿಯೂ, ಅನೇಕ ಜಾಗಗಳಲ್ಲಿ ಅಮಲಾಗುವಷ್ಟು ಸಾಮಾನ್ಯವಾಗಿಯೂ ಇರಬೇಕು. ಹೀಗಾಗಿ ಸರಳೀಕರಿಸಿದ ಈ ಉತ್ತರಗಳ ಮಿತಿಯನ್ನು ಮತ್ತು ಅವುಗಳಿಂದ ಆಗುವ ಅಪಾಯ/ನಷ್ಟವನ್ನು ಸುಧೀರ್ ಎತ್ತಿ ತೋರಿಸುತ್ತಾರೆ. ಪುಸ್ತಕವನ್ನು ಅವರು ಅಂಕಿ-ಸಂಖ್ಯೆಯಾಧಾರದ ಮೇಲೆಯೇ ಸಂಶೊಧನೆ ನಡೆಸುವ "ಕ್ವಾಂಟಿಟೇಟಿವ್" ಜನರಿಗೂ, ಸಂಸ್ಕೃತಿಯ - ಸಂಬಂಧಗಳ ಚೌಕಟ್ಟಿನಲ್ಲಿ ಸಂಶೋಧನೆ ನಡೆಸುವ "ಎಥ್ನೋಗ್ರಾಫರ್ಸ್" ಗೂ ಇರುವ ವ್ಯತ್ಯಾಸವನ್ನು ಚರ್ಚಿಸುತ್ತಲೇ ಪ್ರಾರಂಭಿಸಿದರೂ ತಾವೇ ಮೊದಲಿಗೆ ಪ್ರಶ್ನಾವಳಿಯನ್ನು ಹಿಡಿದು ಸಂಖ್ಯಾಶಾಸ್ತ್ರದ ಮೂಲಕ ಆ ಬಡವರ ಕೇರಿಯನ್ನು ಪ್ರವೇಶಿಸಿದರು ಎನ್ನುವುದನ್ನು ಕೆಲ ಕ್ಷಣಗಳ ಮಟ್ಟಿಗೆ ಮರೆತುಬಿಡುತ್ತಾರೆ.

ಸುಧೀರ್ ಒಂದು ಪ್ರಶ್ನಾವಳಿಯನ್ನು ಹಿಡಿದು ರಾಬರ್ಟ್ ಟೇಲರ್ ಹೋಮ್ಸ್ ಕೇರಿಯನ್ನು ಪ್ರವೇಶಿಸಿದಾಗ ನಡೆದ ಘಟನೆಯನ್ನು ವಿವರಿಸುವ ರೀತಿಯನ್ನು ನಾವು ಗ್ರಹಿಸಿದರೆ ನಮಗೆ ಸುಧೀರ್ ನಿಜಕ್ಕೂ ಅಂಥ ಒಂದು ಮಳ್ಳ ಪ್ರಶ್ನಾವಳಿಯನ್ನು ಹಿಡಿದು ಹೊರಟಿದ್ದರೇ ಅಥವಾ ಅದನ್ನು ನಾಟಕೀಯವಾಗಿಸಿ ತಾವು ಅಧ್ಯಯನ ಮಾಡುತ್ತಿರುವ ವಿಷಯದ ಜಟಿಲತೆಯನ್ನು ನಮಗೆ ವಿವರಿಸುತ್ತಿದ್ದಾರೆಯೇ ಅನ್ನುವ ಅನುಮಾನ ಬರುತ್ತದೆ.

ನಾನು ಹೀಗೆ ಹೇಳುವುದಕ್ಕೆ ಕಾರಣ ಅವರು ಆ ಬಿಲ್ಡಿಂಗಿಗೆ ಪ್ರವೇಶಿಸಿ, ಅಲ್ಲಿ ವಾಸವಾಗಿರುವವರನ್ನು ಕೇಳಿದ್ದರೆನ್ನಲಾದ ಮೊದಲ ಪ್ರಶ್ನೆ: “How does it feel to be black and poor?” [ಬಡವರೂ, ಕಪ್ಪು ಬಣ್ಣದವರೂ ಆಗಿರುವಾಗಿರುವ ನಿಮಗೆ ಇದರಿಂದ ಏನನ್ನಿಸುತ್ತದೆ? [p.14] ಇದಕ್ಕೆ ಐದು ಉತ್ತರಗಳಲ್ಲಿ ಒಂದನ್ನು ಆ ವ್ಯಕ್ತಿ ಆರಿಸಬೇಕು: "ತುಂಬಾ ಹೀನ, ಕೆಟ್ಟದನ್ನಿಸುತ್ತದೆ, ಪರವಾಗಿಲ್ಲ, ಉತ್ತಮ, ಅತ್ಯುತ್ತಮ". ಬಡತನವನ್ನು ಅರ್ಥಮಾಡಿಕೊಳ್ಳಲು ಸುಧೀರ್ ನಿಜಕ್ಕೂ ಈ ರೀತಿಯ ಪ್ರಶ್ನೋತ್ತರಗಳಿದ್ದ ಪ್ರಶ್ನಾವಳಿಯನ್ನು ತೆಗೆದು ಹೋಗಿದ್ದರೆ ಅದರ ನಿರರ್ಥಕತೆ ನಮ್ಮ ಕಣ್ಣಿನೆದುರಿಗೇ ಎದ್ದು ನಿಲ್ಲುತ್ತದೆ. ಈ ರೀತಿಯ ಪ್ರಶ್ನೆಗೆ ಗ್ಯಾಂಗುಗಳಲ್ಲಿ ಕೆಲಸ ಮಾಡುವ ಕತ್ತಿ ಝಳಪಿಸುವ ರೌಡಿ "ಕೇಯಿಸಿಕೋ, ನಿನಗೆ ಇದೇನು ಕೇಯಿಸಿಕೊಳ್ಳುವ ಮಕ್ಕಳಾಟ ಅನ್ನಿಸುತ್ತಿದೆಯಾ? [“Fuck you!... You got to be Fucking kidding me…..”] ಅನ್ನುವ ಪ್ರಶ್ನೆಯನ್ನು ಕೇಳಿದರೆ, ಈ ಪ್ರಶ್ನಾವಳಿಯನ್ನು ನೋಡಿದ ಸಾರಸ್ವತ ಲೋಕ ರೌಡಿ ಉಪಯೋಗಿಸಿದ ಪದಗಳನ್ನು ಉಪಯೋಗಿಸಲಾರದಾದರೂ, ಅವರ ಭಾಷೇ ಶಿಷ್ಟವಾಗಿರುತ್ತದಾದರೂ, ಅವರುಗಳ ಪ್ರತಿಕ್ರಿಯೆಯ ಹಿಂದಿನ ಭಾವನೆಗಳು ಇದಕ್ಕಿಂತ ಭಿನ್ನವಾಗಿ ಏನೂ ಇರುವುದಿಲ್ಲ.
ಮುಂದೆ ಜೆ.ಟಿ ಎನ್ನುವ ವ್ಯಕ್ತಿಯ ಜೊತೆಗಿನ ಒಡನಾಟದಲ್ಲಿ ಅವರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಈ ಪ್ರಶ್ನೆಯ ಹಿಂದಿನ ಜಟಿಲವಿಚಾರವನ್ನು ಅನ್ನುವುದು ನಮಗೆ ಕೂಡಲೇ ವೇದ್ಯವಾಗುತ್ತದೆ. ಆದರೂ ಒಬ್ಬ ಸಂಶೋಧಕ ಈ ರೀತಿಯ ಐದು ಅಂಶಗಳ ರೆನ್ಸಿಸ್ ಲಿಕರ್ಟ್ ಮಾಪನವನ್ನು ಹಿಡಿದು ಪ್ರಶ್ನಾವಳಿಯ ಜೊತೆಗೆ ಈ ಇಂಥ ಏರಿಯಾದಲ್ಲಿ ಓಡಾಡುತ್ತಿರುವುದನ್ನು ನೆನಸಿಕೊಂಡರೆ ನನಗೆ ನಡುಕ ಹುಟ್ಟುತ್ತದೆ!

ಬಹುಶಃ ಇದು ಸರ್ವೇ ವಿಧಾನದ ಬಗ್ಗೆ ಅವರು ಮಾಡುತ್ತಿರುವ ಅಣಕವಿರಬಹುದು. ಆದರೆ ಸುಧೀರ್ ಪ್ರವೇಶಿಸುವ ಜಟಿಲ ಜಗತ್ತಿಗೆ ಇದು ಒಂದು ಒಳ್ಳೆಯ ಪ್ರವೇಶ ಮಾರ್ಗ. ಪುಟ ೧೬ರರಲ್ಲಿ ಸುಧೀರನ್ನು ಗ್ಯಾಂಗುಗಳ ಪ್ರಪಂಚಕ್ಕೆ ಸೇರಿಸಲು ಸಹಾಯ ಮಾಡುವ ಜೆ.ಟಿ ಜೊತೆಗೆ ನಡೆಯುವ ಸಂಭಾಷಣೆ ಅವರ ಮನಸ್ತತ್ವವನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ.

"ಬಡವರೂ, ಕಪ್ಪು ಬಣ್ಣದವರೂ ಆಗಿರುವಾಗಿರುವ ನಿಮಗೆ ಇದರಿಂದ ಏನನ್ನಿಸುತ್ತದೆ?"

“ನಾನು ಕಪ್ಪುಬಣ್ಣದವನಲ್ಲ” ಆತ ಮಿಕ್ಕವರನ್ನು ನೋಡುತ್ತಾ ಎಲ್ಲ ಅರಿತವನಂತೆ ಉತ್ತರಿಸಿದ.

“ಹಾಗಾದರೆ ಆಫ್ರಿಕನ್ ಅಮೆರಿಕನ್ ಆಗಿ, ಬಡವರೂ ಆಗಿರುವುದು ನಿಮಗೆ ಹೇಗನ್ನಿಸುತ್ತದೆ?” ನಾನು ಬಣ್ಣದ ಮಾತಾಡಿ ಆತನನ್ನು ಬೇಸರಗೊಳಿಸಿದ್ದೆ ಅಂದುಕೊಳ್ಳುತ್ತಾ ಕ್ಷಮೆಯಾಚಿಸುವ ಧ್ವನಿಯಲ್ಲಿ ಕೇಳಿದೆ.

“ನಾನು ಆಫ್ರಿಕನ್ ಅಮೆರಿಕನ್ ಅಲ್ಲ.... ನಾನೊಬ್ಬ ನಿಗ್ಗರ್"

……..

“ಈ ಕಟ್ಟಡದಲ್ಲಿರುವವರು ನಿಗ್ಗರ್ ಗಳು” ಆತ ಕಡೆಗೂ ಹೇಳಿದ “ಆಫ್ರಿಕನ್ ಅಮೆರಿಕನ್ನರು ಬಡಾವಣೆಗಳಲ್ಲಿರುತ್ತಾರೆ. ಆಫ್ರಿಕನ್ ಅಮೆರಿಕನ್ನರು ಕೆಲಸಕ್ಕೆ ಟೈ ಕಟ್ಟಿ ಹೋಗುತ್ತಾರೆ. ನಿಗ್ಗರ್‌ಗಳಿಗೆ ಕೆಲಸವೇ ಸಿಗುವುದಿಲ್ಲ.”


ಸರ್ವೆ ಮಾಡುವಾಗಲೂ ಪ್ರಶ್ನೆಗಳನ್ನು ರೂಪಿಸುವುದು ಹಾಗೂ ಅದನ್ನು ಕೇಳುವುದು ಹೇಗೆನ್ನುವ ಪಾಠವನ್ನು ಸುಧೀರ್‌ಗೆ ಈ ಮೊದಲ ಭೇಟಿಯೇ ಕಲಿಸಿಕೊಡುತ್ತದೆ. ಹೀಗಾಗಿಯೇ ಸರ್ವೇ ವಿಧಾನವನ್ನು ಬಿಟ್ಟು ಮುಂದುವರೆಯಲು ಈ ಅನುಭವವೇ ಆತನಿಗೆ ಸಾಕಾಗಿರಬೇಕು. ಆ ದಿನ ಸುಧೀರನ್ನು ಕೊಲ್ಲಲೂ ಅವರು ತಯಾರಿದ್ದರು. ಒಂದು ರಾತ್ರೆಗೆ ಅವನನ್ನು ತಮ್ಮಲ್ಲಿ ಬಂಧಿಸಿದ್ದರು. ಹಾಗೂ "ಈ ರೀತಿಯ ಮಳ್ಳ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲು ಅವರ ಜೊತೆಯಲ್ಲಿ ಕಾಲ ಕಳೆಯುವುದರ ಮೂಲಕ ಹೆಚ್ಚು ಅರ್ಥಮಾಡಿಕೊಳ್ಳಬಹುದು" ಅನ್ನುವ ಉಪದೇಶವನ್ನೂ ನೀಡಿದ್ದರು. ಈ ಅನುಭವವನ್ನು ಪಡೆದ ಯಾವುದೇ ಸಂಶೋಧಕ ಅಲ್ಲಿಂದ ಓಡಿ ತನ್ನ ವಿಶ್ವವಿದ್ಯಾಲಯದ ಬೆಚ್ಚನೆಯ ವಾತಾವರಣದಲ್ಲಿ ಅಡಗಿ ತನ್ನ ಸಂಶೋಧನೆಯ ವಿಷಯವನ್ನು ಬದಲಿಸುವುದು ಸಹಜವೇ ಆಗಿತ್ತು.

ಆದರೆ ಮಾರನೆಯ ದಿನ ಸುಧೀರ್ ಮತ್ತೆ ಜೆಟಿಯ ಬಳಿ ಹೋಗಿ ಅವರ ಜೊತೆ ಕಾಲಹರಣಮಾಡಿ ಅವರುಗಳನ್ನು ಅರ್ಥಮಾಡಿಕೊಳ್ಳಲು ತಯಾರಾಗುತ್ತಾರೆ. ಹೀಗೆ ಸುಧೀರ್ ಬಗ್ಗೆ ಸ್ಟೀವನ್ ಡಬ್ನರ್ ಬರೆದ ಮಾತುಗಳನ್ನು ಸುಧೀರ್ ನಿಜವಾಗಿಸುತ್ತಾರೆ. ಪುಸ್ತಕದ ಮುನ್ನುಡಿಯಲ್ಲಿ ಡಬ್ನರ್ ಸುಧೀರ್ ಬಗ್ಗೆ ಈ ಮಾತುಗಳನ್ನು ಬರೆದಿದ್ದಾರೆ: “ಸುಧೀರ್ ವೆಂಕಟೇಶ್ ಎರಡು ನ್ಯೂನತೆಗಳನ್ನು ಹೊತ್ತು ಜನ್ಮ ಪಡೆದಿದ್ದಾರೆ: ಒಂದು ಅತೀ ವಿಕಸಿತವಾದ ಕುತೂಹಲ ಮತ್ತು ವಿಕಸನಗೊಳ್ಳದ ಭಯದ ಭಾವ.” - ಸುಧೀರ್ ಅನುಭವಿಸಿದ ಘಟನೆಗಳನ್ನು ಗಮನಿಸಿದಾಗ ಈ ಎರಡೂ ನಿಜವೇ ಎಂದು ಅನ್ನಿಸುವುದರಲ್ಲಿ ಆಶ್ಚರ್ಯವೇ ಇಲ್ಲ.

ಸುಧೀರ್ ಈ ವಸತಿಯನ್ನು ಮೊದಲ ಬಾರಿಗೆ ಪ್ರವೇಶಿಸುವುದು ೧೯೮೯ರಲ್ಲಿ. ಈ ಪುಸ್ತಕ ಅಲ್ಲಿಂದ ಆರಂಭವಾಗಿ ೧೯೯೬ರ ತನಕದ ಘಟನೆಗಳನ್ನು ವಿವರಿಸುತ್ತದೆ. ಸುಧೀರ್‌‍ಗೆ ಫುಲ್‌ಬ್ರೈಟ್ ಸ್ಕಾಲರ್‌ಶಿಪ್ ಬಂದು ಶಿಕಾಗೋದಿಂದ ಹೊರಬೀಳಬೇಕಾಗಿ ಬಂದಾಗ ಈ ವಸತಿಯ ಜನರೊಂದಿಗಿನ ಸಂಬಂಧಗಳಿಗೂ ಸಹಜವಾಗಿಯೇ ತೆರೆ ಬೀಳುತ್ತದೆ. ಗಮ್ಮತ್ತಿನ ವಿಷಯವೆಂದರೆ ಆ ಸಮಯಕ್ಕೇ ಶಿಕಾಗೋ ಹೌಸಿಂಗ್ ಅಥಾರಿಟಿಯವರು ಈ ಕಟ್ಟಡಗಳನ್ನು ನೆಲಸಮ ಮಾಡಬೇಕೆಂದು ನಿರ್ಧರಿಸುತ್ತಾರೆ. ಹೀಗೆ ಸುಧೀರ್ ಏಳು ವರ್ಷಗಳ ಕಾಲ ಒಡನಾಡಿದ ಜನಸಮೂಹವೂ ಅಲ್ಲಿಂದ ಹೊರಬಿದ್ದು ಬೇರೊಂದೆಡೆ ಕೆಲಸ, ಧಂಧೆ ಕಂಡುಕೊಂಡು ಹೊಸ ಸವಾಲುಗಳನ್ನೂ ಹೊಸ ಜೀವನೋಪಾಯವನ್ನೂ ಹುಡುಕಿ ಹೊರಡಬೇಕಾಗಿದೆ.

ಎಲ್ಲೆಡಯೂ ಬಡತನವಿದ್ದರೂ, ಹೀಗೆ ಮೂಲೆಗುಂಪಾಗಿರುವ ಜನಸಮೂಹ ಈ ರೀತಿಯ ಜೀವನ ಮತ್ತು ಈ ರೀತಿಯ ಕೆಲಸಕ್ಕೆ ಹೇಗೆ ಬರುತ್ತಾರೆ ಅನ್ನುವುದು ನಮಗೆ ಸ್ಪಷ್ಟವಾಗಿ ತಿಳಿಯುವುದಿಲ್ಲ. ಈ ಪ್ರಶ್ನೆಗಳನ್ನು ಉತ್ತರಿಸುವ ಯತ್ನವನ್ನೂ ಈ ಪುಸ್ತಕ ಮಾಡುವುದಿಲ್ಲ. ಈ ಸಮೂಹಗಳನ್ನು ನೋಡಿದಾಗ ನಮಗನ್ನಿಸುವುದು ಮಾದಕ ದ್ರವ್ಯಗಳನ್ನು ಮಾರುವುದೂ, ಸಣ್ಣ ಪುಟ್ಟ ಅಪರಾಧಗಳನ್ನು ಮಾಡುವುದೂ ಅವರಿಗೆ ಸಹಜವಾಗಿಯೇ ಕರಗತವಾಗಿದೆ ಎಂದು. ಇದು ತಪ್ಪೆಂದು ಅವರಿಗೆ ಅನ್ನಿಸುವುದೇ ಇಲ್ಲ. ಅವರಿಗೆ ಬೇರೆ ಉದ್ಯೋಗಾವಕಾಶ ಇಲ್ಲ ಅನ್ನುವುದೂ ನಿಜವಲ್ಲವೇನೋ. ಯಾಕೆಂದರೆ ಆ ಸಮೂಹದಲ್ಲೇ ಕಾರು ರಿಪೇರಿ ಮಾಡುವವರೂ, ಪುಟ್ಟ ವ್ಯಾಪಾರಿಗಳೂ, ಜಗಳಗಳನ್ನು ಪರಿಹರಿಸುವವರೂ, ಕಿರಾಣೆಯಂಗಡಿಯನ್ನು ನಡೆಸುವವರೂ ಹೀಗೆ "ಗ್ಯಾಂಗ್"ಗೆ ಸಣ್ಣಪುಟ್ಟ ಸೇವೆಗಳನ್ನು ಒದಗಿಸುವವರನ್ನು ನಾವು ಕಾಣಬಹುದು. ಈ ರೀತಿಯ “ಗ್ಯಾಂಗು”ಗಳ ಕಥೆಯನ್ನು ರೋಮಾಂಚಕವಾಗಿ ವಿವರಿಸುವ ಕಥೆ-ಕಾದಂಬರಿಗಳಿವೆಯಾದರೂ, ಸುಧೀರ್ ಅವರ ಪುಸ್ತಕ ಈ ಕಥೆಗಳು ಸತ್ಯದೂರವಲ್ಲ ಅನ್ನುವುದನ್ನು ಒಂದು ರೀತಿಯಲ್ಲಿ ವಿವರಿಸುತ್ತದೆ. ವ್ಯತ್ಯಾಸ: ಕಥೆಗಳಲ್ಲಿ ಬರುವ ಪಾತ್ರಗಳಷ್ಟು ವರ್ಣರಂಜಿತವಾಗಿ ನಿಜಜೀವನದ ಪಾತ್ರಗಳು ಇಲ್ಲ. ಅಷ್ಟೇ.

ಸುಧೀರ್ ಬರವಣಿಗೆಯಿಂದ ನಮಗೆ ವೇದ್ಯವಾಗುವುದೇನೆಂದರೆ ’ಬ್ಲಾಕ್ ಕಿಂಗ್ಸ್’ನಂತಹ ಗ್ಯಾಂಗುಗಳು ಸರಕಾರ ಮತ್ತು ಕಂಪನಿಯ ಮಿಶ್ರಣದ ನಿರ್ವಹಣಾ ತಂತ್ರವನ್ನು ಅಳವಡಿಸಿಕೊಂಡಿವೆ. ಒಂದು ಕೊನೆಯಲ್ಲಿ ಕಂಪನಿಯ ರೀತಿಯಲ್ಲಿ - ಮಾದಕ ಪದಾರ್ಥಗಳನ್ನು ಮಾರಾಟಮಾಡುವ ’ಸೇಲ್ಸ್ ಮನ್’ಗಳಿದ್ದರೆ ಅವರ ಅಫೀಸರುಗಳಂತೆ ಪದಾರ್ಥಗಳನ್ನು ಕೊಳ್ಳುವವರೂ ಹಾಗೂ ಕೆಳಗಿನಿಂದ ಮೇಲಕ್ಕೆ ಬಡ್ತಿ ಪಡೆಯುವ ಪ್ರಕ್ರಿಯೆಯೂ ಆ ಗ್ಯಾಂಗುಗಳಲ್ಲಿ ಉಂಟು. ಸುಧೀರ್ ಪರಿಚಯಿಸಿಕೊಂಡು ಗ್ಯಾಂಗಿನ ಜೊತೆ ಒಡನಾಟಕ್ಕೆ ಪರವಾನಗಿ ನೀಡಿದ ಜೆ.ಟಿ.ಗೂ ಈ ಅಧ್ಯಯನ ನಡುವೆ ಒಂದು ಬಡ್ತಿ ಸಿಕ್ಕಿಬಿಡುತ್ತದೆ. ಒಟ್ಟಾರೆ ಜೆ.ಟಿ. ಈ ಏಣಿಯ ನಡುವಿನಲ್ಲಿ ಇದ್ದಂತೆ ನಮಗೆ ಕಾಣುತ್ತದೆ. ಹೀಗಾಗಿ ಗ್ಯಾಂಗುಗಳ ಬಗೆಗಿನ ನಮ್ಮ ಗ್ರಹಿಕೆಯೂ ಆ ಮಟ್ಟದಿಂದ ಉಂಟಾಗುತ್ತದೆ. ಅಲ್ಲಿಂದ ಮುಂದಕ್ಕೆ ಗ್ಯಾಂಗುಗಳ ನಾಯಕತ್ವದ ಆಲೋಚನಾ ಸರಣಿ ಹೇಗಿರುತ್ತದೆ ಎನ್ನುವ ಒಳನೋಟ ಸುಧೀರ್‌ಗಾಗಲೀ ನಮಗಾಗಲೀ ಸಿಗುವುದಿಲ್ಲ. ನಾಯಕತ್ವವನ್ನು ಸುಧೀರ್ ಭೇಟಿಮಾಡುವುದು ’ಗ್ಯಂಗ್ ಪಾರ್ಟಿ’ಯಲ್ಲಿ ಒಮ್ಮೆ ಮಾತ್ರ. ಆದರೆ ಆ ಭಾಗದಲ್ಲಿ ನಮಗೆ ಯಾವ ಒಳನೋಟವೂ ದೊರೆಯುವುದಿಲ್ಲ.

ಆದರೆ ಜೆ.ಟಿಯ ಕೆಳಗಿನ ಸ್ಥರದಲ್ಲಿ ಕೆಲಸ ಮಾಡುವವರ ಬಗ್ಗೆ ನಮಗೆ ಒಳ್ಳೆಯ ಗ್ರಹಿಕೆ ಉಂಟಾಗುತ್ತದೆ. ಈ ಗುಂಪಿನಲ್ಲಿ ಗ್ಯಾಂಗಿಗೆ ಅನೇಕ ಸಹಾಯಕ ಸೇವೆಗಳನ್ನೊದಗಿಸುವ ಜನರ ಪರಿಚಯವೂ ನಮಗಾಗುತ್ತದೆ. ಇವರುಗಳ ನಡುವೆ ಕೆಲ ಪೋಲೀಸಿನವರೂ ಇದ್ದಾರೆ. ಅವರು ಇಲಾಖೆಯಲ್ಲಿದ್ದರೂ ಈ ಜನಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಈ ’ಸಮುದಾಯ’ವನ್ನು ಅರ್ಥಮಾಡಿಕೊಳ್ಳಲು ಬಹುಶಃ ನಾವು ಕೇಳಬೇಕಾದ ಪ್ರಶ್ನೆಯೆಂದರೆ: ಇಷ್ಟೊಂದು ಜನ ಈ ಕಾಯಕದಲ್ಲಿ ಶಾಮೀಲಾಗಲು ಕಾರಣವೇನು ಎನ್ನುವದಾಗಿದೆ. ಅಲ್ಲಿ ಅವರು ತಮ್ಮಿಷ್ಟಾನುಸಾರವಾಗಿ ಗ್ಯಾಂಗಿನಲ್ಲಿದ್ದಾರೆಯೇ? ಅವರುಗಳಿಗೆ ಆ ಕಾಯಕ ಬಿಟ್ಟುಹೋಗಬೇಕೆನ್ನುವ ಬಯಕೆಯಿದೆಯೇ? ಈ ಪ್ರಶ್ನೆಗಳಿಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತವೆ. ಆದರೆ ಹೀಗೆ ಒಂದು ನಿಯಮಿತ ಸ್ಥಳದಲ್ಲಿ ಜೀವಿಸುವ ಜನರ ಜೀವನದಲ್ಲಿ ’ಬದಲಾವಣೆ’ಯನ್ನುಂಟುಮಾಡಲು ಹೊರಟ ’ಸಮುದಾಯ ಕೇಂದ್ರಿತ ಸಂಸ್ಥೆ’ಗಳನ್ನು ನಡೆಸುವವರಿಗೆ ಈ ಉತ್ತರವನ್ನು ಕಂಡುಕೊಳ್ಳುವುದು ಅತೀ ಮುಖ್ಯವಾಗುತ್ತದೆ. ಈ ಪುಸ್ತಕದಲ್ಲಿರುವ ಭಾಷೆ ಅದರ ಹಿಂದಿನ ಮನೋಧರ್ಮವನ್ನು ನಾವು ಗಮನಿಸಿದರೆ, ಈ ರೀತಿಯ ಬದಲಾವಣೆಯನ್ನುಂಟುಮಾಡುವ ಸ್ವಯಂ ಸೇವಾ ಸಂಸ್ಥೆಗಳ ಸಹಾಯವನ್ನು ಅದು ದೊರೆತಾಗ ಮತ್ತು ದೊರೆತಷ್ಟೂ ಕಾಲ ಅನುಭವಿಸುತ್ತಲೇ ತಮ್ಮ ಜೀವನವನ್ನು ಎಂದಿನಂತೆ ಮುಂದುವರೆಸಲು ಆ ಜನ ನಿರ್ಧರಿಸಿರುವಂತೆ ಅನ್ನಿಸುತ್ತದೆ. ಉದಾಹರಣೆಗೆ ಪುಸ್ತಕದ ಕೆಲಭಾಗಗಳಲ್ಲಿ "ಸಮುದಾಯ" ಈ ರೀತಿಯ ’ಬದಲಾವಣೆ’ಯಿಂದ ಖುಷಿಯಾಗೇನೂ ಇಲ್ಲವೆನ್ನುವುದು ವೇದ್ಯವಾಗುತ್ತದೆ. ಅವರನ್ನುತ್ತಾರೆ "ಈ ಕರಿಯರು ನಮ್ಮ ಜೀವನವನ್ನು ನರಕಸದೃಶ ಮಾಡಬಹುದು, ಆದರೂ ಅವರು ನಮ್ಮವರೇ ಅನ್ನುವುದನ್ನು ಮರೆಯಲು ಸಾಧ್ಯವೇ. ಹಾಗೂ ಯಾವ ಮನೆಯಲ್ಲಿ ನಾವು ಹುಟ್ಟುತ್ತೇವೆನ್ನುವುದನ್ನು ನಾವು ಆಯ್ದು ಬರಲು ಸಾಧ್ಯವೇ?" ಎನ್ನುವಂಥಹ ಪ್ರಶ್ನೆಗಳನ್ನು ಅವರು ಕೇಳುತ್ತಾರೆ [ಪು.89]

ಹೀಗೆ ಒಂದು ಸ್ಥರದಲ್ಲಿ ಸಿಕ್ಕಿಬಿದ್ದಿರುವ ಜನರ ದ್ವಂದ್ವಗಳನ್ನು ಸುಧೀರ್ ಚೆನ್ನಾಗಿ ಗ್ರಹಿಸುತ್ತಾರೆ. ಹಸಿವೆಯನ್ನು ತೊಡೆಯಲು ಹೊಟ್ಟೆಪಾಡಿಗೆ ದುಡಿಯಬೇಕೋ ಅಥವಾ ಶಾಲೆಗೆ ಹೋಗಿ ವಿದ್ಯೆಯನ್ನು ಆರ್ಜಿಸಬೇಕೋ ಅನ್ನುವ ದ್ವಂದ್ವ ಬಡವರನ್ನು ಯಾವಾಗಲೂ ಕಾಡುತ್ತಲೇ ಇರುತ್ತದೆ. ಈ ಬಗ್ಗೆ ಪ್ರಶ್ನೆಗಳ ಸರಣಿಯನ್ನು ಸುಧೀರ್ ಕೇಳುವುದಕ್ಕೆ ಬದಲಾಗಿ - ಆ ಸಮುದಾಯದ ಭಾಗವೇ ಆಗಿರುವ ಶ್ರೀಮತಿ ಬೇಯ್ಲಿ ಕೇಳಿ ಸುಧೀರನ್ನು ಉತ್ತರಿಸಲು ಹೇಳಿದಾಗ ಅದರಲ್ಲಿ ಕಡೆಗೆ ಬರುವ ತೀರ್ಪು ನಿರೀಕ್ಷಿತ ದಿಕ್ಕಿನಲ್ಲಿಯೇ ಹೋಗುತ್ತದೆ. ಹೀಗಾಗಿಯೇ ಸುಧೀರ್ ಒಗೆಯುವ "ಮಕ್ಕಳು ಹೈಸ್ಕೂಲು ಪಾಸಾದರೆ ಬಡತನದಿಂದ ಹೊರಬೀಳುವ ಸಾಧ್ಯತೆ ೨೫ ಪ್ರತಿಶತದಷ್ಟು ಹೆಚ್ಚುತ್ತದೆ" ಎನ್ನುವ ಸಂಶೋಧನೆಯ ಫಲಿತಗಳು ಅರ್ಥಹೀನವಾಗಿ ಕಾಣುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಯಾಕೆಂದರೆ ಈ ಟೈಲರ್ ಹೋಮ್ಸ್ ಅನ್ನುವ ಈ ವಸತಿಯಲ್ಲಿ ಕಷ್ಟಪಟ್ಟು ದಿನಕ್ಕೆರಡು ಊಟ ಹೇಗೋ ಸಂಪಾದಿಸುವ ಬಡವರಿದ್ದಾರೆ; ಅಲ್ಲಿಯೇ ಇದ್ದು ಆ ವಾತಾವರಣದಲ್ಲೇ ’ಬೆಳೆದು’ ಮ್ಯಾಲಿಬೂ ಕಾರುಗಳನ್ನು ಓಡಿಸುವ ಮಾಜಿ ಬಡವರಿದ್ದಾರೆ. ಆ ಕಾರುಗಳನ್ನು ಮತ್ಯಾರೋ ತೊಳೆಯುತ್ತಾರೆ. ಹಾಗೆ ತೊಳೆಯುವವರಿಗೆ ದುಡ್ಡು ಸಿಗುವುದಿಲ್ಲ. ಯಾಕೆಂದರೆ ಈ ಸೇವೆಗೆ ಬದಲಾಗಿ ಕಾರು ತೊಳೆದವನ ಮನೆಗೆ ಈತ ’ರಕ್ಷಣೆ’ ನೀಡುತ್ತಾನೆ. ಜನತೆಯ ಒಟ್ಟಾರೆ ಹಿತಕ್ಕಾಗಿ ನಾವು ತೆತ್ತುವ ತೆರಿಗೆಯಂತೆ ಇದೂ ಒಂದು ಸಮಾನಾಂತರ ಅರ್ಥವ್ಯವಸ್ಥೆಯಾಗಿ ನಡೆಯುತ್ತಿದೆ.

ಅಲ್ಲಿನ ಕಾರ್ಯವೈಖರಿಯಲ್ಲಿ ಸಮಸ್ಯೆಯನ್ನು ’ಹೇಗೆ’ ಪರಿಹರಿಸಬೇಕು ಅನ್ನುವ ಬಗ್ಗೆ ವಿಚಾರವಾಗುತ್ತದೆಯೇ ಹೊರತು - ಆ ಸಮಸ್ಯೆಯನ್ನು ಪರಿಹರಿಸಬೇಕೋ ಇಲ್ಲವೋ ಅನ್ನುವುದರ ಬಗ್ಗೆ ಚರ್ಚೆ ನಡೆಯುವುದಿಲ್ಲ [ಪು.164]. ನ್ಯಾಯ ಸಂಪಾದಿಸಲು ಪರಿಹಾರ ಕಂಡುಕೊಳ್ಳಲು ಅವರು ಉಪಯೋಗಿಸುವ ಮಾರ್ಗವನ್ನು ಕಂಡು ಸುಧೀರ್ ಚಡಪಡಿಕೆಯಿಂದ ಹೇಳುತ್ತಾರೆ: "ಇದು ಎಷ್ಟು ವಿಚಿತ್ರ ಜೀವನ - ಹೀಗೆ ಹೇಗೆ ಬದುಕುವುದು ಸಾಧ್ಯ?" ಆದರೆ ಸುಧೀರ್ ಕೇಳಿದ ಈ ಪ್ರಶ್ನೆಗೆ "ಬಹುಶಃ ನಿನಗೆ ಈಗ ಅರ್ಥವಾಗಲು ಪ್ರಾರಂಭವಾಗಿದೆ ಅನ್ನಿಸುತ್ತದೆ. ಬಹುಶಃ ನೀನು ಈ ಬಗ್ಗೆ ಕಲಿಯಲೂ ಪ್ರಾರಂಭಿಸಿರಬಹುದು" ಅನ್ನುವುದು ಬೇಯ್ಲಿಯ ಉತ್ತರ. ಆ ಕಲಿಕೆ ಕೇವಲ ಸುಧೀರ್‌ಗೆ ಮಾತ್ರವಲ್ಲದೇ ಓದುಗನಿಗೂ ಉಂಟಾಗುತ್ತದೆ.

ಸುಧೀರ್ ಬರವಣಿಗೆಯಲ್ಲಿ ಒಂದು ಥರದ ಸ್ಥಿತ ಪ್ರಜ್ಞತೆ ಹಾಗೂ ಒಳಗೊಳ್ಳದಿರುವ ಶೈಲಿಯಿದೆ. ಬಹುಶಃ ಈಗ ಆ ಎಲ್ಲದರಿಂದ ದೂರವಾಗಿ ತಮ್ಮ ವಿಶ್ವವಿದ್ಯಾನಿಲಯದ ಬೆಚ್ಚನೆಯ ವಾತಾವರಣದಲ್ಲಿ ಕೂತುಬರೆಯುತ್ತಿರುವುದರಿಂದ ನಮಗೆ ಹಾಗನ್ನಿಸಬಹುದೇನೋ. ಆತ ಹೆಚ್ಚಾದ ವಿಶ್ಲೇಷಣೆಯನ್ನು ನೀಡದೆಯೇ ಕೇವಲ ತಮ್ಮ ಅನುಭವವನ್ನು ದಾಖಲಿಸಿ, ಮಿಕ್ಕ ವಿಚಾರಗಳನ್ನು ಓದುಗರ ತೀರ್ಪಿಗೆ ಬಿಟ್ಟುಬಿಡುತ್ತಾರೆ. ಘಟಿಸಿದ ಘಟನಾವಳಿಯನ್ನು ತಮ್ಮ ಭಾವನೆಗಳನ್ನು ಒಳಪಡಿಸದೆಯೇ ದೂರದಿಂದ ನೋಡಿ ವರದಿ ಮಾಡುವ ಶೈಲಿಯನ್ನು ಸುಧೀರ್ ತಮ್ಮದಾಗಿಸಿಕೊಂಡಿದ್ದಾರೆ. ಹೀಗೆ ಸುಧೀರ್ ಚಿತ್ರಿಸುವ ಘಟನಾವಳಿಗಳ ಸರಣಿ ಅವರ ಒಟ್ಟಾರೆ ’ಕಥೆ’ಯನ್ನು ನಾವು ಅಂತರ್ಗತ ಮಾಡಿಕೊಳ್ಳಲು ಪೂರಕವಾಗಿದೆ.

ಈ ಪುಸ್ತಕದ ಮಹತ್ವ ಇರುವುದು ಒಂದು ಮುಖ್ಯವಾದ ಅಂಶದಲ್ಲಿ. ಸಂಶೋಧನೆಯಲ್ಲಿ ತೊಡಗುವ ಜನರಿಗೆ ಈ ರೀತಿಯ ಗ್ಯಾಂಗುಗಳೊಂದಿಗೆ ಇದ್ದು ಅಲ್ಲಿಂದ ತಮ್ಮ ಒಳನೋಟಗಳನ್ನು ಪಡೆಯುವ ಘನತೆ ಸಾಮಾನ್ಯವಾಗಿ ದೊರೆಯುವುದಿಲ್ಲ. ಅವರುಗಳು ಜೀವಿಸುವ ಜಾಗವನ್ನು ಸರಕಾರ "ಪ್ರಾಜೆಕ್ಟ್" ಎಂದು ಕರೆದರೂ ಅವರು ಅದನ್ನು ಸಮುದಾಯವೆಂದೇ ಕರೆಯುತ್ತಾರೆ. ಈ ಸಮುದಾಯದಲ್ಲಿ ಇರುವುದು ಮಾದಕ ವಸ್ತುಗಳನ್ನು ಮಾರಾಟ ಮಾಡುವ, ಚಿಲ್ಲರೆ ಅಪರಾಧಗಳನ್ನೆಸಗುವ, ಕಾನೂನು ಮುರಿಯುವ ಆದರೆ ಎಲ್ಲವೂ ತಮ್ಮದೇ ಕಾಯಿದೆಯ ಪ್ರಕಾರ ಮಾಡುವ ಜನ. ಆ ಸಮುದಾಯಕ್ಕೆ ಯಾವುದೇ ಕಾರ್ಪರೇಟ್ ಜಗತ್ತಿನಂತೆಯೇ ಅಧಿಕಾರದ ಮಜಲುಗಳೂ, ಬಡ್ತಿ ಕಾರ್ಯಕ್ರಮಗಳೂ, ಅಸೂಯೆಗಳೂ ಹಾಗೂ ಮಾರುಕಟ್ಟೆಯಲ್ಲಿರಬಹುದಾದ ಪೈಪೋಟಿಗಳೂ ಇವೆ!

ಸಂಶೋಧನೆಗೆಂದು ಹೊರಟಿರುವ ಜನರ ನಡವಳಿಕೆಯಲ್ಲಿರಬಹುದಾದ ದ್ವಂದ್ವಗಳನ್ನೂ ಆ ಸ್ಥಳವನ್ನಾಕ್ರಮಿಸಿದ ತಾತ್ವಿಕ ನೆಲೆಯನ್ನೂ ಪುಸ್ತಕ ಚರ್ಚಿಸುತ್ತದೆ. ಎಷ್ಟೋ ಬಾರಿ ಸಂಶೋಧಕನ ನಡವಳಿಕೆಯನ್ನು ಪರೀಕ್ಷೆಗೆ ಒಡ್ಡಲಾಗುತ್ತದೆ. ಈ ಪರೀಕ್ಷೆ ಒಮ್ಮೊಮ್ಮೆ ಪ್ರತ್ಯಕ್ಷವಾಗಿಯಾದರೆ, ಒಮ್ಮೊಮ್ಮೆ ಪರೋಕ್ಷವಾಗಿ ಸುಧೀರ್ ಅಂತಹ ಸಂಶೋಧಕರನ್ನು ಕಾಡುತ್ತದೆ. ಉದಾಹರಣೆಗೆ ವಿಶ್ವವಿದ್ಯಾನಿಲಯದಲ್ಲಿ ಜ್ಞಾನವರ್ಧನೆಯ ಕೆಲಸ ಮಾಡುವ ಸಂಶೋಧಕರು ಒಂದು ಸಮುದಾಯದ ಬಗ್ಗೆ ಅಧ್ಯಯನ ಮಾಡುತ್ತೇವೆ ಎಂದು ಹೊರಟಾಗ - ಹಾಗೊಂದು ’ವಿಷಯ’ವಿದೆ ಅನ್ನುವ ಅಹಂನೊಂದಿಗೆ ಹೋಗುತ್ತಾರೆ. ಆದರೆ ಸುಧೀರ್ ಅಥವಾ ಅವರಂತಹ ಸಂಶೋಧಕರನ್ನೇ ಈ ಸಮುದಾಯ ಹತ್ತಿರದಿಂದ ಅಧ್ಯಯನ ಮಾಡುತ್ತದಲ್ಲದೇ ಅವರನ್ನು ತಮ್ಮದೇ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳಲೂ ಬಹುದು ಅನ್ನುವುದು ನಮಗೆ ಮನವರಿಕೆಯಾಗುತ್ತದೆ. ಸುಧೀರ್ ಇರುವ ಸಂದರ್ಭದಲ್ಲಿ ಅದರಲ್ಲೂ ಅಪರಾಧವನ್ನೇ ಜೀವನಮಾಡಿಕೊಂಡ ಈ ಸಮುದಾಯದ ಭಯಭೀತಿಗಳ ನಡುವಿನಲ್ಲಿ ತಾವು ಮತ್ತಷ್ಟು ಪರೀಕ್ಷೆಗೊಳಗಾಗುವುದನ್ನು ಕಂಡುಕೊಳ್ಳುತ್ತಾರೆ. ಆ ಪರೀಕ್ಷೆಯನ್ನು ನಡೆಸುವವರು ಸುಧೀರನ್ನು ಒಳಸೇರಿಸಿದ ಜನರು ಮಾತ್ರವಲ್ಲ ಬದಲಿಗೆ ಆತನ ಜೊತೆ ಮಾತನಾಡಿದ-ಒಡನಾಡಿದ ಪ್ರತಿಯೊಬ್ಬರೂ ಆತನನ್ನು ಪರೀಕ್ಷೆಗೆ ಒಡ್ಡುತ್ತಿದ್ದಾರೆ ಅನ್ನುವುದನ್ನು ನಾವು ಗಮನಿಸಬೇಕು. ಕೆಲವು ಬಾರಿ ತಮಗೆ ತಿಳಿಯದೆಯೇ ಸುಧೀರ್ ಒಂದು ಪಕ್ಷವನ್ನು ಬೆಂಬಲಿಸಿಬಿಡುತ್ತಾರೆ [ಅಥವಾ ಜೆ.ಟಿಯ ಏಜೆಂಟ್ ಅನ್ನುವ ಅಭಿಪ್ರಾಯ ಉಂಟಾಗುವುದರಿಂದ ಆತನ ಪಕ್ಷಪಾತ ಮಾಡುತ್ತಿರುವಂತೆ ಇತರರಿಗೆ ಕಂಡುಬರುತ್ತಾರೆ]. ಒಮ್ಮೆ ಜೆಟಿಯ ಸಹಚರರು ಆತನ ಬಗ್ಗೆ ದೂರಿದ್ದನ್ನು ತಮಗರಿವಿಲ್ಲದಂತೆಯೇ ಸಹಜ ಸಂಭಾಷಣೆಯಲ್ಲಿ ಜೆಟಿಯ ಜೊತೆ ಚರ್ಚಿಸಿ ಸಹಚರರ ಕೋಪ-ಶಾಪಕ್ಕೊಳಗಾಗುತ್ತಾರೆ. ಸುಧೀರ್‌ಗೆ ಮಾಹಿತಿ ನೀಡುತ್ತಿರುವವರೇ ಆತ ಬರೆದುಕೊಂಡ ಮಾಹಿತಿಯ ನೋಟ್ಸ್ ಕೂಲಂಕಶವಾಗಿ ಪರೀಕ್ಷಿಸುತ್ತಿದ್ದಾರೆ! ಹೀಗಾಗಿ ಆ ನೋಟ್ಸ್ ಅನುಸಾರವಾಗಿ ಹೊಸ ಮಾಹಿತಿಯನ್ನೂ ಅವರು ತಿರುಚಿ ನೀಡುವ ಸಾಧ್ಯತೆಯಿದೆ! ಹೀಗಾಗಿಯೇ ಭಾಗವಹಿಸಿ ಕಂಡುಕೊಳ್ಳುವ [participant observation] ವಿಧಾನದ ಅಧ್ಯಯನದ ಬಗ್ಗೆ ಕೆಲ ಪ್ರಶ್ನೆಗಳೂ ಉದ್ಭವವಾಗುತ್ತವೆ. ಭಾಗವಹಿಸುವ ಪ್ರಕ್ರಿಯೆ ಮುಗಿಯುವುದು, ಕಂಡುಕೊಳ್ಳುವ ಪ್ರಕ್ರಿಯ ಪ್ರಾರಂಭವಾಗುವುದೂ ಯಾವ ಬಿಂದುವಿನಲ್ಲಿ? ಅಥವಾ ಸಮುದಾಯದ ವತಿಯಿಂದ ನೋಡಿದರೆ ಮಾಹಿತಿ ನೀಡುವುದಕ್ಕೂ - ಒಂದು ರೀತಿಯಾಗಿ ಮಾಹಿತಿಯನ್ನು ಬರೆದುಕೊಳ್ಳಲೆಂದೇ ಭಿನ್ನರೀತಿಯ ಪ್ರವರ್ತನೆಯನ್ನು ಪ್ರದರ್ಶಿಸುವುದಕ್ಕೂ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗಳು ಅಧ್ಯಯನದ ರೀತಿನೀತಿಯ ದೃಷ್ಟಿಯಿಂದ ಮುಖ್ಯವಾದ ಪ್ರಶ್ನೆಗಳಾಗುತ್ತವೆ.

ಈ ವಿಷಯಗಳನ್ನು ಸುಧೀರ್ ಚರ್ಚಿಸುವುದಿಲ್ಲವಾದರೂ, ನೇರ ಉತ್ತರಗಳಿಲ್ಲದ ಅನೇಕ ದ್ವಂದ್ವಗಳನ್ನು ಅವರು ಎತ್ತುತ್ತಾರೆ. ಈ ಗ್ಯಾಂಗುಗಳ ಅಧ್ಯಯನ ನಡೆಸುತ್ತಿರುವಾಗ ಪೋಲೀಸರು ತನ್ನನ್ನು ಕರೆದು ಪ್ರಶ್ನಿಸಿದರೆ ತಾನೇನು ಮಾಡಬೇಕು? ತನಗೆ ತಿಳಿದಿರುವ ವಿಚಾರವನ್ನು ಅವರಿಗೆ ಹೇಳಬೇಕೇ? ಈ ಗ್ಯಾಂಗಿನವರು ಒಂದು ಕೊಲೆ ಮಾಡಲು ಯೋಜನೆ ಹಾಕುತ್ತಿರುವುದು ತನಗೆ ತಿಳಿದುಬಂದಾಗ ತೆಗೆದುಕೊಳ್ಳಬೇಕಾದ ನಿಲುವೇನು? ತನ್ನ ಸಂಶೋಧನೆ ಮುಂದುವರೆಯಲು ತಮ್ಮ ಸಮಯವನ್ನೂ ಒಳನೋಟಗಳನ್ನೂ ನೀಡಿದ ಈ ಸಮುದಾಯದವರಿಗೆ ತಾನು ಕೃತಜ್ಞತೆ ತೋರುವುದು ಹೇಗೆ? ಅವರಿಗೆ ಹಣ ನೀಡಬೇಕೇ? ಅವರ ಜೀವನದಲ್ಲಿ ಏನಾದರೂ ಉತ್ತಮವಾಗುವಂತೆ ಕೆಲಸ ಮಾಡಬೇಕೇ? ತನಗೆ ತಿಳಿದಿರುವ ಸರ್ಕಾರಿ ಯೋಜನೆಗಳು ಇವರತ್ತ ಹರಿಯುವಂತೆ ಏನಾದರೂ ಮಾಡಬೇಕೇ? ಅಥವಾ ಈ ಸಮುದಾಯವನ್ನು ಕೇವಲ ’ಅಧ್ಯಯನದ ವಿಷಯ’ ಮತ್ತು ’ಉದಾಹರಣೆ’ಗಳೆಂದು ನೋಡಿ ತನ್ನ ಜೀವನವನ್ನು ಮುಂದುವರೆಸಬೇಕೇ? ಇವುಗಳಲ್ಲಿ ಕೆಲವು ಪ್ರಶ್ನೆಗಳು ಆ ನಾಡಿನ ಕಾನೂನಿಗೆ ಸಂಬಂಧಿಸಿದ್ದಾದರೆ, ಬಹಳಷ್ಟು ಪ್ರಶ್ನೆಗಳು ಸಂಶೋಧಕರಿಗಿರುವ ತಾತ್ವಿಕ ನಿಲುವಿನ ಕಷ್ಟದ ಪ್ರಶ್ನೆಗಳಾಗಿವೆ. ಅಧ್ಯಯನ ನಡೆಸುವವರಿಗೂ, ಅಧ್ಯಯನಕ್ಕೊಳಗಾಗುವವರಿಗೂ ನಡುವಿನ ಈ ಜಟಿಲ ಹಾಗೂ ಗಹನ ಸಂಬಂಧದೊಳಗೆ ಯಾವನಿಲುವು ’ಸರಿ’ ಯಾವುದು ’ತಪ್ಪು’ ಎಂದು ನಿರ್ಧರಿಸಲು ಆಗುವುದೇ ಇಲ್ಲ!

ಸುಧೀರ್ ಈ ಪುಸ್ತಕದಲ್ಲಿ ತಮ್ಮ ವಿಚಾರಗಳನ್ನೂ ಹೆಚ್ಚು ವ್ಯಕ್ತವಾಗಿ ಮಂಡಿಸಿದ್ದರೆ ಚೆನ್ನಾಗಿರುತ್ತಿತ್ತೇನೋ ಅಂತ ಒಮ್ಮೊಮ್ಮೆ ಅನ್ನಿಸುವುದು ಸಹಜ. ಆಗ ನಾವುಗಳು ಲೇಖಕರೊಂದಿಗೂ ಚರ್ಚೆಗಿಳಿಯಬಹುದಿತ್ತು. ಆದರೆ ಸುಧೀರ್ ಅವರ ವಿಚಾರಗಳು ವ್ಯಕ್ತವಾಗಿ ಇಲ್ಲದಿದ್ದರೂ ಪುಸ್ತಕದ ಮಹತ್ವವೇನೂ ಕುಂದುವುದಿಲ್ಲ. ಅವರ ಬರವಣಿಗೆಯ ಶೈಲಿ ನಮ್ಮನ್ನು ಈ ವಿಚಾರಗಳಲ್ಲಿ ಒಳಗೊಳ್ಳವ ರೀತಿಯಲ್ಲಿಯೇ ಇದೆ. ಆಗಾಗ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗಳನ್ನೆಬ್ಬಿಸುವದರಲ್ಲೂ ಸುಧೀರ್ ಸಫಲರಾಗುತ್ತಾರೆ. ಗಂಭೀರ ಅಧ್ಯಯನವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳುವ ಜನಪ್ರಿಯ ಶೈಲಿಯಲ್ಲಿ ಬರೆಯುವುದರಲ್ಲಿ ಸುಧೀರ್ ಸಫಲರಾಗಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಲೇಬೇಕಾಗಿದೆ.